ಉಪ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ, ಅನರ್ಹ ಶಾಸಕರನ್ನು ಸೋಲಿಸಿ: ಸಿಪಿಎಂ ಕರೆ

Update: 2019-11-15 17:05 GMT

ಬೆಂಗಳೂರು, ನ.15 : ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಹಾಗೂ ಅನರ್ಹಗೊಂಡಿರುವ ಶಾಸಕರನ್ನು ಸೋಲಿಸುವಂತೆ ಸಿಪಿಎಂ ಕರೆ ನೀಡಿದೆ.

ಬಿಜೆಪಿ ತನ್ನ ಅಧಿಕಾರದಾಹಕ್ಕಾಗಿ ಅನೈತಿಕ ಮಾರ್ಗವನ್ನು ಹಿಡಿದಿದೆ. ಆಡಳಿತ ಪಕ್ಷದ ಸದಸ್ಯರು ಕೈ ಜೋಡಿಸಿದ ಪ್ರಜಾಸತ್ತೆಯ ವಿರೋಧಿ ಸಂಚಿನಿಂದಾಗಿ ಈ ಉಪ ಚುನಾವಣೆಗಳು ಜನತೆಯ ಮೇಲೆ ಹೇರಲ್ಪಟ್ಟಿದೆ. ರಾಜ್ಯ ವ್ಯಾಪಕವಾದ ಬರಗಾಲ, ಅತಿವೃಷ್ಟಿ, ಪ್ರವಾಹಗಳಿಂದ ಮತ್ತು ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ನರಳುತ್ತಿದೆ. ಈ ಸಂದರ್ಭದಲ್ಲಿ ಜನತೆಗೆ ಪರಿಣಾಮಕಾರಿಯಾಗಿ ನೆರವಾಗುವ ಬದಲು ಇಂತಹ ಅನೈತಿಕ ರಾಜಕಾರಣದಲ್ಲಿ ತೊಡಗಿ, ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಸುಪ್ರೀಂಕೋರ್ಟ್ ಅನರ್ಹರು ಎಂದು ವಜಾಗೊಳಿಸಿರುವವರನ್ನು ಜನರು ತಿರಸ್ಕರಿಸಬೇಕು ಎಂದು ಸಿಪಿಎಂ ತಿಳಿಸಿದೆ.

ಮೈತ್ರಿ ಸರಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಡಳಿತ ಪಕ್ಷದ 17ಶಾಸಕರ ರಾಜೀನಾಮೆ ತಿರಸ್ಕರಿಸಿ ಅನರ್ಹಗೊಳಿಸಿದ್ದ ವಿಧಾನಸಭಾಧ್ಯಕ್ಷರ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದು ಸ್ವಾಗತಾರ್ಹ ನಿರ್ಧಾರ ಎಂದು ಸಿಪಿಎಂ ಹೇಳಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಪುನಃ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ದುರದೃಷ್ಟಕರ. ಇಂತಹ ತಪ್ಪಿತಸ್ಥರನ್ನು ಶಿಕ್ಷಿಸಲಾಗದ ದೌರ್ಬಲ್ಯ ಈ ಕಾಯ್ದೆ ಹೊಂದಿರುವುದನ್ನು ಇದು ಬಯಲಿಗೆಳೆದಿದೆ. ಆದುದರಿಂದ ತಕ್ಷಣವೇ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ಮಾಡುವಂತೆ ಸರಕಾರವನ್ನು ಸಿಪಿಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News