ಕಾರ್ಲ್‌ಮಾರ್ಕ್ಸ್‌ಗಿಂತ ಮುಂಚೆಯೇ ಕನಕದಾಸರು ಸಾಮಾಜಿಕ ಸಮಾನತೆ ಸಾರಿದ್ದರು: ಡಾ.ಮಾ.ನಾಗರಾಜ್

Update: 2019-11-15 17:56 GMT

ಬೆಂಗಳೂರು, ನ.15: ಕಾರ್ಲ್ಸ್‌ಮಾರ್ಕ್ಸ್‌ಗಿಂತ ಮುಂಚೆಯೇ ಕನಕದಾಸರು ಸಾಮಾಜಿಕ ಸಮಾನತೆಯನ್ನು ಸಾರಿದ್ದರು. ಕನಕದಾಸರ ಕೀರ್ತನೆಗಳು ಕಬ್ಬಿಣದ ಕಡಲೆಯಲ್ಲ, ನಾಲಗೆಯಲ್ಲಿ ನಲಿಯುವಂತಹ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮಾ.ನಾಗರಾಜ್ ತಿಳಿಸಿದ್ದಾರೆ.

ಶುಕ್ರವಾರ ಕನಕ ಜಯಂತಿ ಅಂಗವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವೇಶ್ವರರು ತೋರಿದ ಸಮಾನತೆ ಮಾರ್ಗ, ಸಾಮಾಜಿಕ ಕ್ರಾಂತಿಯನ್ನು 16ನೇ ಶತಮಾನದಲ್ಲಿ ಕನಕದಾಸರು ಮುಂದುವರೆಸಿದರು ಎಂದರು.

ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣದೇವರಾಯರ ಆಳ್ವಿಕೆ ಕಾಲದಲ್ಲಿ ಕವಿಗಳು, ವಿದ್ವಾಂಸರು ಸೇರಿದಂತೆ ಎಲ್ಲರೂ ರಾಜಾಶ್ರಯ ಪಡೆಯಲು ಹೊರಟಿದ್ದ ವೇಳೆ, 80 ಹಳ್ಳಿಗಳಿಗೆ ದಂಡನಾಯಕರಾಗಿದ್ದ ಕನಕದಾಸರು ಇದನ್ನು ಇಷ್ಟಪಡಲಿಲ್ಲ. ಸಾಮಾಜಿಕ ಅಸಮಾನತೆ ತುಂಬಿದ ಸಮಾಜದಲ್ಲಿ ಜನರನ್ನು ಸರಿದಾರಿಗೆ ತರಲು ಮತ್ತು ಜನರಲ್ಲಿನ ಕೀಳರಿಮೆ ಹೋಗಲಾಡಿಸಲು ಜನರ ಬಳಿಗೆ ಹೋದರು ಎಂದು ಅವರು ತಿಳಿಸಿದರು.

ಜಾತಿ-ಜಾತಿಗಳ ಮಧ್ಯೆ ಮೇಲು-ಕೀಳು ಎಂಬ ಭಾವನೆ, ಶೋಷಣೆ ತೊಡೆದು ಹಾಕುವ ನಿಟ್ಟಿನಲ್ಲಿ ಹೋರಾಟ ನಡೆಸಿದರು. ‘ಕುಲ-ಕುಲವೆಂದು ಹೊಡೆದಾಡದಿರಿ, ಬಾಗಿಲನು ತೆರೆದು’ ಮುಂತಾದ ಕೀರ್ತನೆಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವುದಷ್ಟೇ ಅಲ್ಲದೆ, ಸುಲಭವಾಗಿ ಹಾಡಬಹುದಾಗಿದೆ ಎಂದು ನಾಗರಾಜ್ ಹೇಳಿದರು.

ಕನಕದಾಸರ ತತ್ವಾದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿವೆ. ನಾವೆಲ್ಲರೂ ಅವರು ತೋರಿದ ಹಾದಿಯಲ್ಲಿ ಸಾಗಿದರೆ ಕನಕ ಜಯಂತಿಗೆ ಅರ್ಥ ಬರುತ್ತದೆ. ಕಾಗಿನೆಲೆ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರಕಾರ ವಿಶೇಷ ಆಸಕ್ತಿ ವಹಿಸಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಬಿಜೆಪಿ ಸರಕಾರದ ಪ್ರಯತ್ನವಾಗಿ ಕಾಗಿನೆಲೆ ಮತ್ತು ಕನಕದಾಸರ ಜನ್ಮಸ್ಥಳ ಬಾಡ ಅಭಿವೃದ್ಧಿ ಕಂಡಿವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News