​ಪಿಂಕ್ ಬಾಲ್ ಟೆಸ್ಟ್‌ಗೆ ರಾಷ್ಟ್ರಗೀತೆ ನುಡಿಸುವವರು ಯಾರು ಗೊತ್ತೇ ?

Update: 2019-11-16 03:52 GMT
ಫೋಟೊ : BCCI

ಕೊಲ್ಕತ್ತಾ : ಭಾರತ ಮತ್ತು ಬಾಂಗ್ಲಾದೇಶ ನಡುವೆ ಈ ತಿಂಗಳ 22ರಿಂದ ಆರಂಭವಾಗುವ ಐತಿಹಾಸಿಕ ಹಗಲು- ರಾತ್ರಿ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತೀಯ ಸೇನೆಯ ಯೋಧರು ಉಭಯ ದೇಶಗಳ ರಾಷ್ಟ್ರಗೀತೆ ನುಡಿಸಲಿದ್ದಾರೆ.

ಪಂದ್ಯದಲ್ಲಿ ಟಾಸ್ ಚಿಮ್ಮುವ ಮುನ್ನ ಸೇನೆಯ ಯೋಧರು ಉಭಯ ತಂಡಗಳ ನಾಯಕರಿಗೆ ಪಿಂಕ್ ಬಾಲ್ ಹಸ್ತಾಂತರಿಸುವರು.

ಮೊಟ್ಟಮೊದಲ ಪಿಂಕ್ ಬಾಲ್ ಟೆಸ್ಟ್‌ನ ಸಿದ್ಧತೆಗಳ ಬಗ್ಗೆ ಮಾತನಾಡಿದ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ, "ಪ್ಯಾರಾಟ್ರೂಪರ್‌ಗಳು ವಿಕೆಟ್‌ಗೆ ಎರಡು ಪಿಂಕ್‌ ಬಾಲ್‌ಗಳೊಂದಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಸೇನೆಯ ಪೂರ್ವ ಕಮಾಂಡ್ ಜತೆ ಚರ್ಚಿಸಲಾಗಿದೆ" ಎಂದು ಹೇಳಿದ್ದಾರೆ.

ಇದಾದ ಬಳಿಕ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಾಂಪ್ರದಾಯಿಕ ಈಡನ್ ಬೆಲ್ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ 20 ನಿಮಿಷದ ಚಹಾ ವಿರಾಮ ವೇಳೆ ಮಾಜಿ ನಾಯಕರು ಮತ್ತು ಇತರ ಕ್ರೀಡೆಗಳ ತಾರೆಗಳನ್ನು ಗಾಡಿಯಲ್ಲಿ ಬೌಂಡರಿ ಲೈನ್ ಉದ್ದಕ್ಕೂ ಮೆರವಣಿಗೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

40 ನಿಮಿಷಗಳ ಸೂಪರ್‌ಬ್ರೇಕ್ ಅವಧಿಯಲ್ಲಿ ಸಿಎಬಿ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಂದ ಫ್ಯಾಬುಲಸ್ ಫೈವ್ ಹೆಸರಿನ ಟಾಕ್‌ಶೋ ಏರ್ಪಡಿಸಿದೆ. ಇವರು 2001ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಐತಿಹಾಸಿಕ ವಿಜಯದ ಕ್ಷಣಗಳನ್ನು ಮೆಲುಕು ಹಾಕಲಿದ್ದಾರೆ. ಇದನ್ನು ಬೃಹತ್ ಪರದೆಯಲ್ಲಿ ಪ್ರದರ್ಶಿಸಲಾಗುವುದು ಹಾಗೂ ಧ್ವನಿ ಎಲ್ಲ ವೀಕ್ಷಕರಿಗೆ ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅವಿಷೇಕ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News