ಸರಕಾರ ರಚಿಸುವ ಬಿಜೆಪಿಯ ವಿಶ್ವಾಸ ಕುದುರೆ ವ್ಯಾಪಾರದ ಸೂಚನೆ: ಶಿವಸೇನೆ

Update: 2019-11-16 15:38 GMT

ಮುಂಬೈ, ನ.16: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 14 ಪಕ್ಷೇತರ ಶಾಸಕರ ಬೆಂಬಲವಿದೆ. ರಾಜ್ಯದಲ್ಲಿ ಬಿಜೆಪಿಯ ಬೆಂಬಲವಿಲ್ಲದೆ ಯಾವ ಪಕ್ಷವೂ ಸರಕಾರ ರಚಿಸಲು ಸಾಧ್ಯವಿಲ್ಲ ಎಂಬ ಬಿಜೆಪಿ ಮುಖಂಡರ ವಿಶ್ವಾಸದ ಮಾತು, ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುವ ಬಗ್ಗೆ ಮುನ್ಸೂಚನೆಯಾಗಿದೆ ಎಂದು ಶಿವಸೇನೆ ಟೀಕಿಸಿದೆ.

ರಾಷ್ಟ್ರಪತಿ ಆಡಳಿತದ ಸೋಗಿನಡಿ ಕುದುರೆ ವ್ಯಾಪಾರ ನಡೆಸಲು ಬಿಜೆಪಿ ತಂತ್ರ ಹೂಡಿದೆ. ಆದರೆ ಅನೈತಿಕ ಮಾರ್ಗಗಳು ಮಹಾರಾಷ್ಟ್ರದ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ . 105 ಸ್ಥಾನವಿರುವ ಕಾರಣ ತಮಗೆ ಬಹುಮತವಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ ಬಿಜೆಪಿ, ಈಗ ತಾನು ಮಾತ್ರ ಸರಕಾರ ರಚಿಸಲು ಸಾಧ್ಯವೆಂದು ಯಾವ ಆಧಾರದಲ್ಲಿ ಹೇಳುತ್ತಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಲೇಖನದಲ್ಲಿ ಶಿವಸೇನೆ ಪ್ರಶ್ನಿಸಿದೆ.

  ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ 6 ತಿಂಗಳಿಗಿಂತ ಹೆಚ್ಚು ಸಮಯ ಅಧಿಕಾರದಲ್ಲಿರದು ಎಂಬ ಫಡ್ನವೀಸ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ, ರಾಜ್ಯದಲ್ಲಿ ರಚನೆಯಾಗಿರುವ ಹೊಸ ರಾಜಕೀಯ ಸಮೀಕರಣ ಹಲವರಿಗೆ ಹೊಟ್ಟೆಯುರಿ ತಂದಿದೆ ಎಂದಿದೆ. ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಯ ಬಗ್ಗೆ ಟೀಕಿಸಿರುವ ಶಿವಸೇನೆ, ಬಹುಷಃ  ಕ್ರಿಕೆಟ್‌ನಲ್ಲಿ ಸುದ್ದಿಮಾಡುತ್ತಿರುವ ಮ್ಯಾಚ್‌ಫಿಕ್ಸಿಂಗ್‌ನಿಂದ ಪ್ರೇರಿತರಾಗಿ ಗಡ್ಕರಿ ಈ ಹೇಳಿಕೆ ನೀಡಿರಬಹುದು. ಈ ಹೇಳಿಕೆ ಕೂಡಾ ಕುದುರೆ ವ್ಯಾಪಾರದ ಸೂಚನೆಯಾಗಿದೆ ಎಂದು ಟೀಕಿಸಿದೆ.

ಬಿಜೆಪಿಗೆ 14 ಪಕ್ಷೇತರರ ಬೆಂಬಲವಿದ್ದು ಈಗ 119 ಶಾಸಕರನ್ನು ಹೊಂದಿದೆ ಎಂಬ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್, ಬಿಜೆಪಿಗೆ ಅಷ್ಟೊಂದು ವಿಶ್ವಾಸವಿದ್ದರೆ ರಾಜ್ಯಪಾಲರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಆದರೆ ಮಹಾರಾಷ್ಟ್ರದಲ್ಲಿ ಕನಿಷ್ಟ 145 ಶಾಸಕರ ಬೆಂಬಲವಿಲ್ಲದೆ ಯಾರು ಕೂಡಾ ಸರಕಾರ ರಚಿಸಲು ಸಾಧ್ಯವಿಲ್ಲ . ಚುನಾವಣೆ ಸಂದರ್ಭ ಇತರ ಪಕ್ಷಗಳಿಂದ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಗೆದ್ದು ಬಂದಿರುವವರಲ್ಲಿ ಮೂಲ ಬಿಜೆಪಿಗರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಈಗ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಆ ಪಕ್ಷ ಸರಕಾರ ರಚಿಸುವ ಹೇಳಿಕೆ ನೀಡುತ್ತಿದೆ ಎಂದು ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News