ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್ ನಿಯೋಗದ ರಾಜ್ಯಪಾಲರ ಭೇಟಿ ಮುಂದೂಡಿಕೆ

Update: 2019-11-16 17:47 GMT
ಫೋಟೊ: indiatoday

ಮುಂಬೈ, ನ.16: ಮಹಾರಾಷ್ಟ್ರ ರಾಜ್ಯಪಾಲರು ಹಾಗೂ ಶಿವಸೇನೆ- ಕಾಂಗ್ರೆಸ್ ಮತ್ತು ಎನ್‌ಸಿಪಿ ನಿಯೋಗದ ಮಧ್ಯೆ ಶನಿವಾರ ಸಂಜೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ ಎಂದು ಶಿವಸೇನೆಯ ಮುಖಂಡ ಏಕನಾಥ್ ಶಿಂಧೆ ಹೇಳಿದ್ದಾರೆ.

ನಿಯೋಗದ ಸದಸ್ಯರು ತಮ್ಮ ತಮ್ಮ ಕ್ಷೇತ್ರದಲ್ಲಿ ಬರ ಪರಿಶೀಲನೆ ಕಾರ್ಯ ಹಾಗೂ ಚುನಾವಣಾ ವೆಚ್ಚದ ದಾಖಲೆಪತ್ರ ಪೂರ್ಣಗೊಳಿಸುವ ಕೆಲಸದಲ್ಲಿ ತೊಡಗಿರುವ ಕಾರಣ ಶನಿವಾರದ ಸಭೆಯನ್ನು ಮುಂದೂಡಲಾಗಿದೆ ಎಂದವರು ಹೇಳಿದ್ದಾರೆ. ಸಭೆಯನ್ನು ಮರು ನಿಗದಿಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರೊಂದಿಗಿನ ಸಭೆಯಲ್ಲಿ ನಿಯೋಗವು ರೈತರು ಎದುರಿಸುತ್ತಿರುವ ಸಮಸ್ಯೆ ಹಾಗೂ ನಿರುದ್ಯೋಗದ ಪ್ರಮಾಣದ ಬಗ್ಗೆ ಚರ್ಚಿಸುವ ಅಧಿಕೃತ ಕಾರ್ಯಕ್ರಮವಿತ್ತು. ಆದರೆ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಬಲ ಪ್ರದರ್ಶನ ಇದಾಗಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಶನಿವಾರ ಮುಂಬೈಯಲ್ಲಿ ಎನ್‌ಸಿಪಿ ಅಧ್ಯಕ್ಷರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದು ಶಿವಸೇನೆಯ ಮೂಲಗಳು ತಿಳಿಸಿವೆ. ಬಳಿಕ ಪವಾರ್ ರವಿವಾರ ದಿಲ್ಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News