ಬ್ರೆಝಿಲ್ ವಿರುದ್ಧ ಅರ್ಜೆಂಟೀನಕ್ಕೆ ಜಯ

Update: 2019-11-16 18:22 GMT

ರಿಯಾದ್, ನ.16: ಅಂತರ್‌ರಾಷ್ಟ್ರೀಯ ಪಂದ್ಯದ ಅಮಾನತಿನಿಂದ ವಾಪಸಾದ ಲಿಯೊನೆಲ್ ಮೆಸ್ಸಿ ಸೌದಿ ಅರೇಬಿಯದಲ್ಲಿ ಶುಕ್ರವಾರ ನಡೆದ ಅಂತರ್‌ರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಬ್ರೆಝಿಲ್ ವಿರುದ್ಧ ಅರ್ಜೆಂಟೀನ ತಂಡ 1-0 ಅಂತರದಿಂದ ಗೆಲುವು ಸಾಧಿಸಿ ತು. ಈ ಮೂಲಕ ಸೂಪರ್ ಕ್ಯಾಸಿಯೊ ಎಂದು ಕರೆಯಲ್ಪಡುವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದಕ್ಷಿಣ ಅಮೆರಿಕ ಫುಟ್ಬಾಲ್ ಕಾನ್ಫೆಡರೇಶನ್‌ನಿಂದ ಭ್ರಷ್ಟ ಎಂದು ಕರೆಸಿಕೊಂಡು ನಾಲ್ಕು ಪಂದ್ಯಗಳಿಂದ ವಂಚಿತರಾಗಿದ್ದ ಮೆಸ್ಸಿ 14ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನದ ಗೆಲುವಿಗೆ ಭಾಷ್ಯ ಬರೆದರು. ಈ ಫಲಿತಾಂಶದಿಂದಾಗಿ ಬ್ರೆಝಿಲ್ ತಂಡ ಜುಲೈನಲ್ಲಿ ಕೋಪಾ ಅಮೆರಿಕ ಪ್ರಶಸ್ತಿಯನ್ನು ಎತ್ತಿ ಹಿಡಿದ ಬಳಿಕ ಐದನೇ ಪಂದ್ಯದಲ್ಲಿ ಸೋತಿದೆ. 2013ರ ಬಳಿಕ ಕಳಪೆ ಪ್ರದರ್ಶನ ನೀಡಿದೆ.

ಉಭಯ ತಂಡಗಳು ಕೋಪಾ ಅಮೆರಿಕ ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಬ್ರೆಝಿಲ್ ತಂಡ ಅರ್ಜೆಂಟೀನವನ್ನು 2-0 ಅಂತರದಿಂದ ಸೋಲಿಸಿತ್ತು.

 ಬ್ರೆಝಿಲ್ ತಂಡ 9ನೇ ನಿಮಿಷದಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆಯಿತ್ತು. ಆದರೆ ಗ್ಯಾಬ್ರಿಯಲ್ ಜೀಸಸ್ ಅವರ ಪೆನಾಲ್ಟಿ ಕಿಕ್ ವೈಡ್ ಆಗಿತ್ತು. 3 ನಿಮಿಷಗಳ ಬಳಿಕ ಅರ್ಜೆಂಟೀನ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಬ್ರೆಝಿಲ್ ಕೀಪರ್ ಅಲಿಸನ್ ಅವರು ಮೆಸ್ಸಿಯ ಗೋಲಿನ ಯತ್ನವನ್ನು ವಿಫಲಗೊಳಿಸಿದರು. ಪಟ್ಟು ಬಿಡದ ಮೆಸ್ಸಿ 14ನೇ ನಿಮಿಷದಲ್ಲಿ ಗೋಲು ಬಾರಿಸಿ ಅರ್ಜೆಂಟೀನಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದ ಅಂತ್ಯಕ್ಕೆ ಮೊದಲು ಮೆಸ್ಸಿ ಎರಡು ಬಾರಿ ಅರ್ಜೆಂಟೀನದ ಮುನ್ನಡೆಯನ್ನು ದ್ವಿಗುಣಗೊಳಿಸುವ ಅವಕಾಶವನ್ನು ಕೈಚೆಲ್ಲಿದರು. ಡಿಫೆಂಡರ್ ಎಡೆರ್ ಮಿಲಿಟಾವೊ ಹಾಗೂ ಅಲಿಸ್ಸನ್ ಅವರು ಮೆಸ್ಸಿಗೆ ಗೋಲು ನಿರಾಕರಿಸಿದರು.

 ಪ್ಯಾರಿಸ್ ಸೈಂಟ್ ಜರ್ಮೈನ್ ಸ್ಟ್ರೈಕರ್ ನೇಮರ್ ಅನುಪಸ್ಥಿತಿಯಲ್ಲಿ ಆಡಿದ ಬ್ರೆಝಿಲ್ ಅರ್ಜೆಂಟೀನಕ್ಕೆ ಸವಾಲಾಗಲು ವಿಫಲವಾಯಿತು. 42 ಫೌಲ್ಸ್ ಹಾಗೂ 6 ಹಳದಿ ಕಾರ್ಡ್ ಗಳನ್ನು ಪಡೆಯಿತು. ಅರ್ಜೆಂಟೀನ ತಂಡದಲ್ಲಿ ಸೆರ್ಗಿಯೊ ಅಗುರೊ ಹಾಗೂ ಪೌಲೊ ಡೈಬಾಲಾ ಅನುಪಸ್ಥಿತಿ ಇತ್ತು. ಕೋಪಾ ಅಮೆರಿಕ ಟೂರ್ನಿಯ ಸೆಮಿ ಫೈನಲ್‌ನಿಂದ ನಿರ್ಗಮಿಸಿದ ಬಳಿಕ ಅರ್ಜೆಂಟೀನ ಆಡಿರುವ 5 ಪಂದ್ಯಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News