ದುಬೈನಲ್ಲಿ ಬಜರಂಗ್ ಪೂನಿಯಾ, ಗೌರವ್ ಶರ್ಮಾಗೆ ಗೌರವ

Update: 2019-11-16 18:23 GMT

ದುಬೈ, ನ.16: ಇಲ್ಲಿ ನಡೆದ ಇಂಡೋ ಅರಬ್ ಮುಖಂಡರ ಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ವರ್ಷದ ಭಾರತದ ವ್ಯಕ್ತಿ ಪ್ರಶಸ್ತಿಗೆ(ಕ್ರೀಡೆ)ಭಾಜನರಾಗಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದ ಆಯೋಜಕರಿಗೆ ನಾನು ಕೃತಜ್ಞತೆ ಸಲ್ಲಿಸುವೆ. ಇಂತಹ ಪ್ರಶಸ್ತಿಗಳು ಅಥ್ಲೀಟ್ಸ್‌ಗಳಿಗೆ ಉತ್ತೇಜನ ನೀಡುತ್ತದೆ. ನಾನು ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದೇನೆ. ನನ್ನ ದೇಶಕ್ಕೆ ಹೆಮ್ಮೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಬಜರಂಗ್ ಪ್ರತಿಕ್ರಿಯಿಸಿದರು.

ವರ್ಷದ ಪ್ರಮುಖ ದೂರದರ್ಶಿ ನಾಯಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪವರ್ ಲಿಫ್ಟಿಂಗ್ ಚಾಂಪಿಯನ್ ಮಹಾಂತ ಗೌರವ್ ಶರ್ಮಾ,ನನ್ನ ಸಂತೋಷವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಈ ಪ್ರಶಸ್ತಿಯನ್ನು ಗೆದ್ದ ಬಳಿಕ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ. ಪವರ್‌ಲಿಫ್ಟಿಂಗ್ ಕ್ರೀಡೆಯ ಕುರಿತು ಜನರಿಗೆ ಹೆಚ್ಚಿನ ಅರಿವಿಲ್ಲ. ನನ್ನ ಸಾಧನೆಯ ಬಗ್ಗೆ ನನಗೆ ಖುಷಿ ಇದೆ. ನನ್ನ ಕನಸನ್ನು ಈಡೇರಿಸಿಕೊಳ್ಳಲು ನೆರವಾದ ನನ್ನ ಗುರು, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಭೂಪಿಂದರ್ ಧವನ್ ಸರ್‌ಗೆ ನಾನು ಕೃತಜ್ಞತೆ ಸಲ್ಲಿಸುವೆ ಎಂದರು.

ಗೌರವ್ ಇತ್ತೀಚೆಗೆ ಲಂಡನ್‌ನಲ್ಲಿ ಮಹಾತ್ಮ ಗಾಂಧಿ ಲೀಡರ್‌ಶಿಪ್ ಪ್ರಶಸ್ತಿ ಸ್ವೀಕರಿಸಿದ್ದರು. ಚಾಂದಿನಿ ಚೌಕ್‌ನ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದಾರೆ. 2007ರಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನ ಜಯಿಸಿದ್ದರು. 2016ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನದ ಪದಕ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News