ಭೂಮಿಯಲ್ಲಿ ಮರಗಳು ಇಲ್ಲವಾದರೆ ಏನಾಗುತ್ತೆ?

Update: 2019-11-17 06:05 GMT

ಒಂದಿಲ್ಲೊಂದು ಕಾರಣದಿಂದಾಗಿ ಇಂದು ಅರಣ್ಯ ಪ್ರದೇಶ ಕಡಿಮೆಯಾಗುತ್ತಲೇ ಇದೆ. ಕಾಡ್ಗಿಚ್ಚು ಅಥವಾ ಮಾನವನ ಚಟುವಟಿಕೆಗಳಿಂದ ಅರಣ್ಯದಲ್ಲಿನ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರತಿವರ್ಷ ವಿಶ್ವಾದ್ಯಂತ 15 ಶತಕೋಟಿ ಮರಗಳನ್ನು ಕತ್ತರಿಸಲಾಗುತ್ತದೆ. ಇದೇ ಪ್ರಮಾಣದಲ್ಲಿ ಮರಗಳ ನಾಶವಾದರೆ ಜೀವಿಗಳ ಗತಿಯೇನು? ವಾಯುಗುಣ ಏನಾಗುತ್ತದೆ? ಜೀವಿಗಳ ಆಹಾರ ಪೂರೈಕೆಯ ಮಾರ್ಗವೇನು? ಎಂಬ ಗಂಭೀರ ಪ್ರಶ್ನೆಗಳು ಎದುರಾಗುತ್ತವೆ. ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹೇಳುವುದು ತೀರಾ ಬಾಲಿಶತನ. ಮರಗಳಿಲ್ಲದೇ ಹೋದರೆ? ಎಂದು ಭವಿಷ್ಯದ ಬಗ್ಗೆ ಯೋಚಿಸಿದಾಗ ಅದರ ಕರಾಳತೆ ನಮಗೆ ಕಾಣುತ್ತದೆ. ಮೊದಲ ಚಿಂತೆಯೆಂದರೆ ಉಸಿರಾಡಲು ಬೇಕಾದ ಗಾಳಿಯನ್ನು ಎಲ್ಲಿಂದ ತರಬೇಕು? ಮರಗಳಿಲ್ಲದೇ ಹೋದರೆ ಸಕಲ ಜೀವಿಗಳಿಗೆ ವರವಾಗಿದ್ದ ದ್ಯುತಿಸಂಶ್ಲೇಷಣಾ ಕ್ರಿಯೆ ಸಂಪೂರ್ಣ ನಿಂತು ಹೋಗುತ್ತದೆ. ಆಗ ಆಮ್ಲಜನಕದ ಉತ್ಪತ್ತಿಯೂ ಇಲ್ಲ, ಆಹಾರದ ಉತ್ಪತ್ತಿಯೂ ಇಲ್ಲ. ಇವೆರಡೂ ಇಲ್ಲದೆ ಜೀವಿಗಳ ಬದುಕು ಹೇಗೆ ಸಾಧ್ಯ?.

ಒಂದು ವೇಳೆ ಎಲ್ಲಾ ಮರಗಳನ್ನು ಅನಿವಾರ್ಯವಾಗಿ ಕತ್ತರಿಸಿ ಹಾಕಲಾಯಿತು ಎಂದುಕೊಳ್ಳೋಣ. ಆಗ ಕತ್ತರಿಸಿದ ಮರಗಳನ್ನು ಎಲ್ಲಿಡುವುದು? ಎಂಬ ಪ್ರಶ್ನೆ ಬರುತ್ತದೆ. ಹಾಗೂ ಹೀಗೂ ಕೆಲವು ಮರಗಳನ್ನು ನಿತ್ಯ ಬಳಕೆಗೆ ಬಳಸುತ್ತೇವೆ ಎಂದುಕೊಳ್ಳೋಣ. ಉಳಿದ ಕತ್ತರಿಸಿದ ಮರಗಳೆಲ್ಲ ಮಣ್ಣಲ್ಲಿ ಕೊಳೆತು ಹೋಗುವುದಿಲ್ಲವೇ?. ಮಾನವನ ಚಟುವಟಿಕೆಗಳಿಂದ ಪ್ರತಿವರ್ಷ ಭೂಮಿಗೆ 35 ಶತಕೋಟಿ ಇಂಗಾಲದ ಡೈ ಆಕ್ಸೈಡನ್ನು ಬಿಡುಗಡೆ ಮಾಡುತ್ತೇವೆ. ಮರಗಳನ್ನೆಲ್ಲಾ ಕಡಿದು ಹಾಕಿದರೆ ಈ ಇಷ್ಟು ದೊಡ್ಡ ಪ್ರಮಾಣದ ಇಂಗಾಲದ ಡೈ ಆಕ್ಸೈಡನ್ನು ಏನು ಮಾಡುವುದು? ಇಷ್ಟು ಮೊತ್ತದ ಇಂಗಾಲದ ಡೈ ಆಕ್ಸೈಡ್ ಭೂಮಿಯನ್ನು ನಾಶ ಮಾಡದೇ ಬಿಟ್ಟೀತೇ? ಮರಗಳೇ ಇಲ್ಲದೆ ಹೋದರೆ ಕಾಡು ಸಂಪೂರ್ಣ ಇಲ್ಲದಂತಾಗುತ್ತದೆ. ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಕ್ರಮೇಣವಾಗಿ ಅವುಗಳ ಸಂತತಿಯೂ ನಾಶವಾಗುತ್ತದೆ. ಕಾಡನ್ನೇ ಆಶ್ರಯಿಸಿದ ಲಕ್ಷಾಂತರ ಪಕ್ಷಿಗಳು ಇಲ್ಲವಾಗುತ್ತವೆ. ಆನೆ, ಜಿಂಕೆ, ಹುಲಿ, ಚಿರತೆ, ಮಂಗ, ಪಾಂಡಾ ಇನ್ನಿತರ ಕಾಡು ಪ್ರಾಣಿಗಳನ್ನು ಜೀವಂತವಾಗಿ ನೋಡಲಾದೀತೇ? ಅಷ್ಟೇ ಅಲ್ಲ ಕಾಡಿನ ಮರಗಳಲ್ಲಿ ಅವಿತು ಕುಳಿತ ಲಕ್ಷಾಂತರ ಚಿಟ್ಟೆಗಳು, ಕ್ರಿಮಿಕೀಟಗಳು ನಾಶಹೊಂದುತ್ತವೆ. ಒಂದು ಅಧ್ಯಯನದ ಪ್ರಕಾರ ಈಗಾಗಲೇ ಪ್ರತಿವರ್ಷ ಶೇ.2.5ರಷ್ಟು ಕೀಟಗಳ ಸಂತತಿ ಕಡಿಮೆಯಾಗುತ್ತಲೇ ಇದೆ. ಹೀಗೆ ಜೀವಿಗಳೆಲ್ಲಾ ನಾಶವಾಗುತ್ತಾ ಹೋದರೆ ಜೀವವೈವಿಧ್ಯತೆ ಉಳಿಯುವುದಿಲ್ಲ. ಅಲ್ಲವೇ?

ದುರದೃಷ್ಟವಶಾತ್ ಈಗಾಗಲೇ ಬಹುಪಾಲು ಅರಣ್ಯವನ್ನು ನಾಶ ಮಾಡಿದ್ದೇವೆ. ಪ್ರತಿವರ್ಷ ಕಾಡಿಗೆ ಬೆಂಕಿ ಬೀಳುತ್ತಿದೆ. ಸಾವಿರಾರು ಕಾಡು ಮರಗಳು ನಾಶವಾಗುವ ಜೊತೆಗೆ ಸಾವಿರಾರು ಪ್ರಾಣಿಗಳು, ಪಕ್ಷಿಗಳು, ಕ್ರಿಮಿಕೀಟಗಳು ನಾಶ ವಾಗುತ್ತಿವೆ. ಈಗಾಗಲೇ ಕೆಲವು ಜೀವಿಗಳು ವಿನಾಶದ ಅಂಚಿನಲ್ಲಿವೆ. ಇದನ್ನು ತಡೆಯುವ ವಿಧಾನಗಳ ಬಗ್ಗೆ ನಾವ್ಯಾರು ಚಿಂತಿಸುತ್ತಿಲ್ಲ.

ಮರಗಳಿಲ್ಲದೇ ಹೋದರೆ, ಜೀವಿಗಳು ಉಸಿರಾಡಲು ಅಗತ್ಯವಾದ ಆಮ್ಲಜನಕದ ಸರಬರಾಜು ನಿಲ್ಲುತ್ತದೆ. ಸಾಗರಗಳು ಉತ್ಪತ್ತಿ ಮಾಡುವ ಆಮ್ಲಜನಕ ಉಸಿರಾಡಿ ಬದುಕ ಬಹುದು ಎನ್ನುತ್ತಾರೆ ಕೆಲವರು. ಪ್ರತಿವರ್ಷ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸಾಗರಗಳಿಂದ ಉತ್ಪತ್ತಿಯಾಗುವ ಆಮ್ಲಜನಕದ ಪ್ರಮಾಣ ಮಾತ್ರ ಹೆಚ್ಚಾಗುತ್ತಿಲ್ಲ. ಅಲ್ಲದೇ ಗಾಳಿಯ ಮಾಲಿನ್ಯವೂ ಮುಂದುವರಿದಿದೆ. ಮರಗಳ ಎಲೆಗಳು ಗಾಳಿಯಲ್ಲಿನ ರಾಸಾಯನಿಕಗಳನ್ನು ಹೀರಿಕೊಂಡು ಶುದ್ಧೀಕರಣಗೊಳಿಸುತ್ತಿದ್ದವು. ಆದರೆ ಮರಗಳಿಲ್ಲದೇ ಹೋದರೆ ಗಾಳಿಯ ಶುದ್ಧ್ದೀಕರಣ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಈಗಾಗಲೇ ವಿಷಾನಿಲ ಸೇವನೆಯಿಂದ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿನ ಮರಗಳು ಪ್ರತಿವರ್ಷ 2.5 ಟನ್ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ. ಈ ಹೀರುವಿಕೆ ಇಲ್ಲದೇ ಹೋದರೆ ಋಣಾತ್ಮಕ ಪರಿಣಾಮಗಳು ಗಮನಾರ್ಹವಾಗಿ ಹೆಚ್ಚುತ್ತವೆ.

ಇಂಗಾಲದ ಡೈ ಆಕ್ಸೈಡ್‌ನ ಹೆಚ್ಚಳದಿಂದ ಭೂಮಿಯ ಬಿಸಿ ಪ್ರತಿವರ್ಷ ಹೆಚ್ಚುತ್ತಲೇ ಇದೆ. ಮರಗಳು ಕೇವಲ ನೆರಳನ್ನು ನೀಡಿ ಭೂಮಿಯನ್ನು ತಂಪುಗೊಳಿಸುವುದಲ್ಲದೆ ದ್ಯುತಿಸಂಶ್ಲೇಷಣೆ ಮೂಲಕ ನೀರನ್ನು ಬಿಡುಗಡೆ ಮಾಡಿ ಭೂಮಿಯನ್ನು ತಂಪಾಗಿಡಲು ಸಹಕರಿಸುತ್ತವೆ. ಅಲ್ಲದೇ ಮರಗಳು ಮಳೆಗೂ ಕಾರಣವಾಗುತ್ತವೆ. ಮಳೆ ಇಲ್ಲದೇ ಹೋದರೆ ಬರಗಾಲ ಉದ್ಭವಿಸುತ್ತದೆ. ಬಿಸಿಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ನದಿ, ಕೆರೆ, ಸರೋವರಗಳ ನೀರು ಬತ್ತಿ ಹೋಗುತ್ತದೆ. ಶಾಖ ಹೆಚ್ಚಳದಿಂದ ಹಿಮ ಕರಗಿ ಸಮುದ್ರ ಸೇರುತ್ತದೆ. ಭೂಮಿಯಲ್ಲಿ ನೆಲದ ಪ್ರಮಾಣ ಕಡಿಮೆಯಾಗುತ್ತದೆ. ಇದ್ದ ಅಲ್ಪ ಸ್ವಲ್ಪ ನೆಲ ಬರಡಾಗುತ್ತದೆ. ಮರಗಳಿಲ್ಲದೇ ಹೋದರೆ ಆಹಾರ ಸಂಪೂರ್ಣ ಇಲ್ಲದಂತಾಗುತ್ತದೆ. ಸೇಬು, ಮಾವು, ಬಾಳೆ, ಸೀಬೆ ಮುಂತಾದ ಹಣ್ಣುಗಳ ರುಚಿ ಮರೆತು ಹೋಗುತ್ತದೆ. ಮರಗಳಿಲ್ಲದೇ ಹೋದರೆ ಬರಗಾಲ ಆವರಿಸಬಹುದು. ಅಪರೂಪಕ್ಕೊಮ್ಮೆ ಮಳೆ ಬಂದರೂ ಅದು ನಿಷ್ಪ್ರಯೋಜಕ. ಏಕೆಂದರೆ ಮೇಲ್ಮಣ್ಣು ಸಂಪೂರ್ಣವಾಗಿ ವಿಷಮಯವಾಗಿರುತ್ತದೆ. ಕಾಲಕಾಲಕ್ಕೆ ಮಳೆ ಇಲ್ಲದಿದ್ದರೆ, ಯಾವುದೇ ಜೀವರಾಸಾಯನಿಕ ಪ್ರಕ್ರಿಯೆಗಳು ಆ ಮಣ್ಣಿನಲ್ಲಿ ನಡೆಯುವುದೇ ಇಲ್ಲ. ಇದು ಕೃಷಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೇಗೋ ಒಂದಿಷ್ಟು ಬೀಜಗಳು ಮೊಳಕೆಯೊಡೆದವು ಎಂದುಕೊಳ್ಳೊಣ. ಆದರೆ ಅವು ಬೆಳೆದು ಪರಾಗಸ್ಪರ್ಶ ಉಂಟಾಗಲು ಕೀಟ, ಚಿಟ್ಟೆ, ಪಕ್ಷಿ, ಗಾಳಿ ಇವುಗಳಾವುವೂ ಇರುವುದಿಲ್ಲ. ಹಾಗಾಗಿ ತುಂಬಾ ಅನಾರೋಗ್ಯಕರ ವಾತಾವರಣದಲ್ಲಿ ಬೆಳೆದ ಆ ಬೆಳೆಯನ್ನು ತಿನ್ನಲಾಗುವುದಿಲ್ಲ. ಮರಗಳಿಲ್ಲದೆ ಆಮ್ಲಜನಕದ ಕೊರತೆ ಒಂದೆಡೆಯಾದರೆ ಹೊಸ ಮನೆ ನಿರ್ಮಾಣಕ್ಕೆ ಅಗತ್ಯವಾದ ಮರಗಳನ್ನು ಎಲ್ಲಿಂದ ತರುವುದು ಎಂಬ ಸಮಸ್ಯೆ ಉದ್ಭವಿಸುತ್ತದೆ. ಬಾಗಿಲು, ಕಿಟಕಿ, ಕದ, ವಾಲ್‌ರೋಬೊ, ಕುರ್ಚಿ, ಟೇಬಲ್, ಸೋಫಾ, ಮಂಚ ಇತ್ಯಾದಿ ಪೀಠೋಪಕರಣಗಳಿಗೆ ಬೇಕಾದ ಮರಕ್ಕೆ ಏನು ಮಾಡುವುದು? ಎಲ್ಲಾ ಪೀಠೋಪಕರಣಗಳನ್ನು ಗಾಜು ಅಥವಾ ಸಿಮೆಂಟಿನಿಂದ ಮಾಡಿಸಲಾದೀತೇ? ಮೇಲಿನ ಗಂಭೀರ ಪರಿಸ್ಥಿತಿಗಳನ್ನು ಗಮನಿಸಿ ಚಿಂತಿಸ ಬೇಕಾಗಿಲ್ಲ. ಆಶಾದಾಯಕವಾಗಿ ಇನ್ನೂ ಭೂಮಿಯ ಮೇಲೆ ಮರಗಳಿವೆ. ಈಗ ನಮ್ಮೆಗೆಲ್ಲರಿಗೂ ಅವುಗಳನ್ನು ಉಳಿಸಿಕೊಳ್ಳುವ ಅವಕಾಶಗಳಿವೆ. ಹೆಚ್ಚು ಹೆಚ್ಚು ಗಿಡಮರ ಗಳನ್ನು ಬೆಳೆಸುವ ಪ್ರಯತ್ನ ಮಾಡೋಣ. ಈಗಿರುವ ಅರಣ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಎಲ್ಲರೂ ಸೇರಿ ಸಂರಕ್ಷಿಸೋಣ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News