ಸಮ್ಮಿಶ್ರ ಹಾಗೂ ಬಿಜೆಪಿ ಸರಕಾರ ದಲಿತ ವಿರೋಧಿ: ಮಾಜಿ ಸಚಿವ ಎಚ್.ಆಂಜನೇಯ

Update: 2019-11-17 14:04 GMT

ಬೆಂಗಳೂರು, ನ.17: ಸಮ್ಮಿಶ್ರ ಸರಕಾರ ಹಾಗೂ ಈಗಿನ ಬಿಜೆಪಿ ಸರಕಾರ ದಲಿತ ಸಮುದಾಯದ ವಿರೋಧಿಯಾಗಿದ್ದು, ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಜಾರಿ ಮಾಡಿದ್ದ ದಲಿತಪರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದ್ದಾರೆ. 

ರವಿವಾರ ನಗರದಲ್ಲಿ ಕವಿ ಕೆ.ಬಿ.ಸಿದ್ದಯ್ಯ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನೆನಪಿನಂಗಳ ಸಭೆಯಲ್ಲಿ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆಯಲ್ಲಿ ದಲಿತ ಸಮುದಾಯದ ಜಮೀನುಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸುತ್ತಿಲ್ಲ. ಈ ಹಿಂದಿನ ಅವಧಿಯಲ್ಲಿ ಕೊರೆಸಲಾಗಿದ್ದ ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್‌ಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಳೆದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಇದನ್ನು ರದ್ದು ಮಾಡಲಾಗಿತ್ತು. ನಾವು ಒತ್ತಡ ಹಾಕಿದ ನಂತರ ಈಗ ಎಲ್ಲರಿಗೂ ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಂತರ್‌ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನವನ್ನು ನನ್ನ ಅವಧಿಯಲ್ಲಿ ಘೋಷಿಸಿದ್ದೆ. ಆದರೆ, ಈ ಜನಪರ ಯೋಜನೆಯ ಕುರಿತು ಬಿಜೆಪಿ ನಾಯಕರು ನನ್ನ ಕ್ಷೇತ್ರದಲ್ಲಿರುವ ಲಿಂಗಾಯಿತ ಕೇರಿಗೆ ಹೋಗಿ ನನ್ನ ವಿರುದ್ಧ ತಪ್ಪಾಗಿ ಪ್ರಚಾರ ಮಾಡಿದರು. ಇದು ಸಹ ನನ್ನ ಸೋಲಿಗೆ ಕಾರಣವಾಯಿತು. ಆದರೂ ನಾನು ನಂಬಿದ್ದ ತತ್ವ ಸಿದ್ಧಾಂತಗಳಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲವೆಂದು ಅವರು ಹೇಳಿದರು.

ಸದಾಶಿವ ವರದಿಯ ಬಗ್ಗೆ ಅಪಪ್ರಚಾರ: ದಲಿತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಕಲ್ಪಿಸುವಂತಹ ಸದಾಶಿವ ವರದಿ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ವರದಿಯಲ್ಲಿ ಎಸ್ಸಿ ಮೀಸಲಾತಿ ಪಟ್ಟಿಯಿಂದ ಲಂಬಾಣಿ, ಕೊರಮ ಸಮುದಾಯವನ್ನು ತೆಗೆಯುವಂತೆ ಶಿಫಾರಸು ಮಾಡಲಾಗಿದೆಯೆಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಎಸ್ಸಿ ಪಟ್ಟಿಯಿಂದ ಯಾವ ಜಾತಿಯನ್ನು ಹೊರಗಿಡಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಕಲ್ಪಿಸುವುದಷ್ಟೆ ವರದಿಯ ಮೂಲ ಆಶಯವಾಗಿದೆ. ಹೀಗಾಗಿ ನಮ್ಮ ಸರಕಾರದ ಅವಧಿಯಲ್ಲಿಯೇ ವರದಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಕೆಲವರು ಚುನಾವಣೆ ಹತ್ತಿರವಿದೆ. ಈಗ ವರದಿ ಬಿಡುಗಡೆ ಮಾಡುವುದು ಸೂಕ್ತವಲ್ಲವೆಂದು ಅಡ್ಡಿಪಡಿಸಿದರು ಎಂದು ಅವರು ತಿಳಿಸಿದರು.

ಸದಾಶಿವ ವರದಿಯಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕವಾಗಿ ಚರ್ಚಿಸುವುದಕ್ಕಾದರು ವರದಿಯನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ವರದಿಯಲ್ಲಿ ಯಾವುದೇ ಸಮುದಾಯದಕ್ಕೆ ಅನ್ಯಾಯವಾಗುವಂತಹ ಅಂಶಗಳಿದ್ದರೆ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇರುತ್ತದೆ ಎಂದು ಅವರು ಹೇಳಿದರು.

‘ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.18ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಲು ನ.20ಕ್ಕೆ ಗಾಂಧಿಭವನದಲ್ಲಿ ಸಭೆ ಆಯೋಜಿಸಲಾಗಿದೆ. ಇದಕ್ಕೆ ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರತಿನಿಧಿಗಳು ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ’

-ಎಚ್.ಆಂಜನೇಯ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News