ಉಪಚುನಾವಣೆ ಗೆಲುವಿಗೆ ಬಿಜೆಪಿ ವಾಮಾಮಾರ್ಗ ಹಿಡಿದಿದೆ: ವಿ.ಎಸ್.ಉಗ್ರಪ್ಪ

Update: 2019-11-17 14:06 GMT

ಬೆಂಗಳೂರು, ನ.17: ಉಪಚುನಾವಣೆಯಲ್ಲಿ ಬಿಜೆಪಿಯ ಸೋಲು ನಿಶ್ಚಯ ವಾಗಿದ್ದು, ಹಾಗಾಗಿಯೇ ಗೆಲುವು ಸಾಧಿಸಲು ವಾಮಾಮಾರ್ಗ ಹಿಡಿದಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ರವಿವಾರ ಕ್ವೀನ್ಸ್ ರಸ್ತೆಯ ಕೆಪಿಸಿಸ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುಣಸೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸೀರೆ ಸೇರಿದಂತೆ ಇನ್ನಿತರೆ ವಸ್ತುಗಳಿಂದ ಆಮಿಷವೊಡ್ಡಿ ಮತದಾರರ ಓಲೈಕೆಗೆ ಬಿಜೆಪಿ ಮುಂದಾಗಿದೆ. ಅದೇ ರೀತಿ, ಶಿವಾಜಿನಗರ ಕ್ಷೇತ್ರದಲ್ಲೂ ಭಾಷೆ ಆಧಾರದಲ್ಲಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ ಅನರ್ಹರನ್ನು ಅಳಿಯಂದಿರು ಎಂದಿದ್ದಾರೆ. ಮತ್ತೊಂದು ಕಡೆ ಕೇಂದ್ರ ಸಚಿವರೇ ಆದ ಸದಾನಂದಗೌಡ, ಅನರ್ಹರನ್ನು ಸೊಸೆಯಂದಿರು ಎನ್ನುತ್ತಾರೆ. ಈ ಇಬ್ಬರು ನಾಯಕರು, ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಯಾವ ಹೆಣ್ಣು ಮಗಳು ತವರು ಮನೆಗೆ ದ್ರೋಹ ಬಗೆಯಲ್ಲ. ಕೊಟ್ಟ ಮನೆಗೂ ದ್ರೋಹ ಮಾಡಲ್ಲ. ಆದರೆ, ಅನರ್ಹರು ಎರಡೂ ಮನೆಗೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.

ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಪ್ರಬಲರಾಗಿರುವವರನ್ನೇ ನಾವು ಕಣಕ್ಕಿಳಿಸುತ್ತಿದ್ದೇವೆ. ವಿಜಯನಗರದಲ್ಲಿ ಘೋರ್ಪಡೆ ಸೂಕ್ತ ಆಯ್ಕೆ. ಅವರು ಸ್ಥಳೀಯ ಮಟ್ಟದ ರಾಜಕಾರಣದಿಂದಲೇ ಬಂದವರು. ವಿಜಯನಗರದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಪಕ್ಷದ ತತ್ವ, ಸಿದ್ಧಾಂತ ನೋಡಿ ಜನ ಮತ ನೀಡುತ್ತಿದ್ದಾರೆ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್ ಮಾತನಾಡಿ, ಹೊಸಕೋಟೆ ಕ್ಷೇತ್ರದಲ್ಲಿ ಪದ್ಮಾವತಿ ಸುರೇಶ್ ಅವರಿಗೆ ಪಕ್ಷ ಟಿಕೆಟ್ ನೀಡುವ ಮೂಲಕ, ಮಹಿಳೆಯರಿಗೆ ನ್ಯಾಯ ಒದಗಿಸಲಾಗಿದೆ. ಆದರೆ, ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಪ್ರಮುಖರಿದ್ದರು.

ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಬಿಜೆಪಿ ನಾಯಕರು ಸಂಗ್ರಸಿಟ್ಟಿದ್ದ 30 ಸಾವಿರ ಸೀರೆ ಪ್ಯಾಕೇಟ್‌ಗಳ ಮೇಲೆ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ಭಾವ ಚಿತ್ರಗಳಿವೆ. ಮತದಾರರಿಗೆ ಉಡುಗೊರೆಗಳ ಆಮಿಷ ತೋರಿಸಿ ಓಲೈಸಿಕೊಳ್ಳುವ ಪ್ರಯತ್ನ ಇದಾಗಿದೆ. ಆಯೋಗ ಜೀವಂತವಾಗಿದ್ದರೆ ಬಿಜೆಪಿ ನಾಯಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News