ಬೆಂಗಳೂರು: ಐಎಂಎ ಪ್ರಧಾನ ಕಚೇರಿ ಮುಂಭಾಗ ಜನರ ಪ್ರತಿಭಟನೆ; ಲಾಠಿ ಪ್ರಹಾರ

Update: 2019-11-17 16:46 GMT

ಬೆಂಗಳೂರು, ನ.17: ಐಎಂಎ( ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಆರು ತಿಂಗಳು ಕಳೆದಿದ್ದರೂ, ಸಾವಿರಾರು ಹೂಡಿಕೆದಾರರ ಸಂಕಟ, ಗೋಳಾಟ ಇನ್ನೂ ನಿಂತಿಲ್ಲ. ಇದಕ್ಕೆ ಸಾಕ್ಷಿ ಒದಗಿಸುವಂತೆ ಇಂದು ಶಿವಾಜಿನಗರದಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.

ಇಲ್ಲಿನ ಬೌರಿಂಗ್ ಆಸ್ಪತ್ರೆ ಮುಂಭಾಗದ ಐಎಂಎ ಪ್ರಧಾನ ಕಚೇರಿ ಮುಂಭಾಗ ಜಮಾಯಿಸಿದ್ದ ನೂರಾರು ಹೂಡಿಕೆದಾರರು, ಹಣ ಪಾವತಿಸಿರುವ ಚೀಟಿಗಳನ್ನು ಹಿಡಿದು ಹಣ ವಾಪಸ್ ನೀಡುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

'ಹಲವು ಕಷ್ಟಗಳಿಂದ ಹಣ ಸಂಗ್ರಹಿಸಿ ಇಲ್ಲಿಯೇ ಹೂಡಿಕೆ ಮಾಡಿದ್ದೇವೆ. ಆದರೆ, ಇದೀಗ ಮನೆಯಲ್ಲಿ ಬಡತನ ಹೆಚ್ಚಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮ ಹಣ ಯಾವಾಗ ಬರುತ್ತೆ ಎಂದು ಪ್ರಶ್ನಿಸಿ ಸ್ಥಳದಲ್ಲಿದ್ದ ಪೊಲೀಸರ ಬಳಿಯೇ ಹಣ ಕೊಡಿಸಿ ಎಂದು ಹೂಡಿಕೆದಾರರು ಅಳಲು ತೊಡಿಕೊಂಡರು.

ವಾಗ್ವಾದ: ಪ್ರತಿಭಟನೆಗೆ ಯಾವುದೇ ಮಾಹಿತಿ ನೀಡಿಲ್ಲ. ಪೊಲೀಸರ ಬಳಿ ಅನುಮತಿ ಪಡೆದಿಲ್ಲ. ಈ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಇದ್ದು, ನಿಷೇಧಾಜ್ಞೆ ಎಂದು ಪೊಲೀಸರು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು. ಆದರೆ ಮಹಿಳೆಯರು, ಪ್ರತಿಭಟನೆ ಮಾಡಿಯೇ ಹೋಗುತ್ತೇವೆ ಎಂದು ವಾಗ್ವಾದಕ್ಕಿಳಿದರು.

ಲಾಠಿ ಪ್ರಹಾರ: ಉಪಚುನಾವಣೆ ಕಾರಣ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದಾಗ ಹೂಡಿಕೆದಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದ್ದ ಕಾರಣ, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಏನಿದು ಪ್ರಕರಣ: ಇಲ್ಲಿನ ಶಿವಾಜಿನಗರ ವ್ಯಾಪ್ತಿಯಲ್ಲಿರುವ ಐಎಂಎ ಜ್ಯುವೆಲ್ಸ್ ಮಾಲಕ ಮನ್ಸೂರ್ ಖಾನ್, ತನ್ನ ಸಂಸ್ಥೆಗೆ ಹೂಡಿಕೆ ಮಾಡಿಸಿ ವಂಚಿಸಿದ್ದ. ಈ ಸಂಬಂಧ ಮೊದಲು ಕಮರ್ಷಿಯಲ್ ಠಾಣೆಯಲ್ಲಿ ದೂರು ದಾಖಲಾಗಿ, ನಂತರ ಈ ಪ್ರಕರಣ ಗಂಭೀರವಾದ ಕಾರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸಿಬಿಐಗೆ ಕೋರಿ ಹೈಕೋರ್ಟ್ ಗೆ ಕೂಡ ಪಿಐಎಲ್ ಸಲ್ಲಿಕೆಯಾಗಿತ್ತು. ಸದ್ಯ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ.

ಮಹಿಳೆಗೆ ಕಲ್ಲೇಟು..!
ಅಪರಿಚಿತ ವ್ಯಕ್ತಿಯೊಬ್ಬರು ಕಲ್ಲು ಎಸೆದ ಪರಿಣಾಮ ಪ್ರತಿಭಟನಾನಿರತ ಮಹಿಳೆಯ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಶಿವಾಜಿನಗರ ನಿವಾಸಿ ಮಮ್ತಾಝ್ ಬೇಗಂ ಅವರ ತಲೆಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News