ಯುವ ಕವಿಗಳು ಆಸಕ್ತಿ ವಿಸ್ತಾರಗೊಳಿಸಬೇಕು: ಹಿರಿಯ ಸಾಹಿತಿ ಡಾ.ವೆಂಕಟೇಶಮೂರ್ತಿ

Update: 2019-11-17 16:55 GMT

ಬೆಂಗಳೂರು, ನ 17: ಸಾಮಾಜಿಕ, ಮಾನವೀಯ ನೆಲೆಯಲ್ಲಿ ಆಸಕ್ತಿಗಳನ್ನು ವಿಸ್ತಾರಗೊಳಿಸಿ ಕವಿತೆ ರಚಿಸುವುದನ್ನು ಯುವ ಕವಿಗಳು ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಸಲಹೆ ನೀಡಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಮತ್ತು ಡಾ.ನರಹಳ್ಳಿ ಪ್ರತಿಷ್ಠಾನ ಏರ್ಪಡಿಸಿದ್ದ ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುವೆಂಪು, ಬೇಂದ್ರ, ಕಾರಂತ ಅವರಂತಹ ದೊಡ್ಡ ಸಾಹಿತಿಗಳು ಯಾವುದೇ ಒಂದು ವೈಚಾರಿಕತೆಗೆ ಒಳಗಾಗದೆ ಕಲೆ, ಸಾಹಿತ್ಯ, ಬಂಡಾಯ, ರಾಜಕೀಯ ಸೇರಿ ಎಲ್ಲ ಆಸಕ್ತಿಕರ ವಿಷಯಗಳ ಬಗ್ಗೆ ಮಹತ್ತರ ಕೃತಿಗಳನ್ನು ರಚನೆ ಮಾಡಿದ್ದಾರೆ. ಹಾಗಾಗಿ, ಯುವ ಸಾಹಿತಿಗಳು ಸಹ ತಮ್ಮ ಆಸಕ್ತಿಗಳನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ ಎಂದರು.

ಸಾಹಿತ್ಯದಲ್ಲಿ ನವ್ಯ, ನವೋದಯ, ಬಂಡಾಯ ಎಂಬ ವಿಂಗಡಣೆಯೆ ಅಪಾಯಕಾರಿ. ಕವಿಯಾದವನಿಗೆ ಎಡ-ಬಲಗಳ ಚಿಂತನೆ ಮಾಡಿದರೆ ಆತ ಪ್ರಸಿದ್ಧಿಯಾಗುವುದಿಲ್ಲ. ಕಾವ್ಯ, ಬರವಣಿಗೆಯ ಹಾಗೂ ಆಸಕ್ತಿಗಳನ್ನು ವಿಸ್ತಾರಗೊಳಿಸಿಕೊಂಡಾಗ ಮಾತ್ರ ಸಮರ್ಪಕವಾದ ಕವಿಯಾಗಲು ಸಾಧ್ಯ ಎಂದು ಹೇಳಿದರು.

ಸಾಹಿತಿ ಪ್ರೊ.ಎಂ.ಆರ್. ಕಮಲ ಮಾತನಾಡಿ, ತುರುಣ ಕವಿಗಳ ಬಗ್ಗೆ ಹಿರಿಯ ಕವಿಗಳ ಉಪೇಕ್ಷೆ ಸಲ್ಲದು. ಬದಲಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಬದಲಾದ ಕಾಲಘಟ್ಟದಲ್ಲಿ ಯುವ ಕವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕವಿತೆಗಳನ್ನು ಬರೆಯುತ್ತಾ ಬಂದರು. ಆದರೆ, ಹಿರಿಯ ಕವಿಗಳು ತಮ್ಮ ಕಾವ್ಯವೇ ಶ್ರೇಷ್ಠ ಎಂಬ ಗುಂಗಿನಲ್ಲಿ ತರುಣ ಕವಿಗಳನ್ನು ‘ಫೇಸ್‌ಬುಕ್ ಕವಿಗಳು’ ಎಂದು ನಿರ್ಲಕ್ಷಿಸಿದ್ದು ಉಂಟು ಎಂದರು.

ಇಂದಿನ ಕವಿಗಳಿಗೆ ಯಾವುದೇ ರೀತಿಯ ಸೈದ್ಧಾಂತಿಕ ನಿಲುವಿಲ್ಲ. ತಮಗೆ ಅನ್ನಿಸಿದ ವಿಷಗಳ ಬಗ್ಗೆ ಸ್ವಚ್ಛಂದವಾಗಿ ಕಾವ್ಯ ರಚನೆ ಮಾಡಲು ಮುಕ್ತ ಅವಕಾಶಗಗಳನ್ನೂ ಹಾಗೂ ಆಲೋಚನೆಗಳನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ನೆಲೆಯಲ್ಲಿ ಕವಿತೆಗಳನ್ನು ರಚಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜೇಂದ್ರ ಪ್ರಸಾದ್ ಕೂಡ ಒಬ್ಬರು ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಯುವ ಸಾಹಿತಿ ರಾಜೇಂದ್ರ ಪ್ರಸಾದ್ ಮಾತನಾಡಿ, ಮೊದಲಿನಿಂದಲೂ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯಿತ್ತು. ನಂತರ ಕಾವ್ಯ ರಚನೆಯತ್ತ ಮನಸ್ಸಾಯಿತು. ಆರಂಭದಲ್ಲಿ ವೈದಿಕ ಸಾಹಿತ್ಯದ ಬಗ್ಗೆ ಹೆಚ್ಚು ಓದುತ್ತಿದ್ದೆ. ಆಧ್ಯಾತ್ಮಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂಬುದನ್ನು ಅರಿತು. ಮನುಷ್ಯನಾಗಿ ಕೊನೆಯವರೆಗೂ ಉಳಿಯಬೇಕೆಂಬ ಆಸೆಯಿಂದ ಕಾವ್ಯ ರಚಿಸುತ್ತಿದ್ದೇನೆ ಎಂದು ಹೇಳಿದರು.

ವಿಮರ್ಶಕ ಡಾ.ವಿಕ್ರಂ ವಿಸಾಜಿ, ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಡಾ.ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News