ದಲಿತರ ಐಕ್ಯತೆಗೆ ಹೊಲೆಯ-ಮಾದಿಗರ ಶ್ರೇಷ್ಟತೆಯ ವ್ಯಸನ ಅಡ್ಡಿ: ಹಿರಿಯ ಕವಿ ಡಾ.ಸಿದ್ದಲಿಂಗಯ್ಯ

Update: 2019-11-17 17:07 GMT

ಬೆಂಗಳೂರು, ನ.17: ಪರಿಶಿಷ್ಟ ಜಾತಿಯಲ್ಲಿನ ಹೊಲೆಯ, ಮಾದಿಗ ಸಮುದಾಯಗಳು ತಾವು ಇತರೆ ದಲಿತ ಜಾತಿಗಳಿಗಿಂತ ಶ್ರೇಷ್ಟರೆಂಬ ವ್ಯಸನದಿಂದ ಹೊರಬರದ ಹೊರತು ದಲಿತ ಐಕ್ಯತೆ ಅಸಾಧ್ಯವೆಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.

ರವಿವಾರ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ನಗರದ ಗಾಂಧಿ ಭವನದಲ್ಲಿ ‘ಕಾವ್ಯ ಬಯಲಿನ ನೆನಪಿನಂಗಳದಲ್ಲಿ ಕವಿ ಕೆ.ಬಿ.ಸಿದ್ದಯ್ಯ’ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರ ಐಕ್ಯತೆಯಿಂದ ಇತರೆ ಹಿಂದುಳಿದ ಹಾಗೂ ಶೋಷಿತ ಸಮುದಾಯದ ಬಿಡುಗಡೆ ಸಾಧ್ಯ. ಹೀಗಾಗಿ ದಲಿತ ಸಮುದಾಯಗಳ ಐಕ್ಯತೆಯ ಕಡೆಗೆ ಎಲ್ಲರ ಗಮನವಿರಲಿ ಎಂದು ತಿಳಿಸಿದರು.

ಕವಿ ಕೆ.ವಿ.ಸಿದ್ಧಯ್ಯ ತಮ್ಮ ಒಂದು ಕವನದಲ್ಲಿ, ಮೇಲ್ವರ್ಗದವರು ಮಾದಿಗರ ಮೇಲೆ ಶೋಷಣೆ ಮಾಡುವುದಕ್ಕಿಂತ ಮಾದಿಗರು ದಕ್ಕಲಿಗರ ಮೇಲೆ ಶೋಷಣೆ ಮಾಡುವುದೆ ನನಗೆ ನೋವಿನ ಸಂಗತಿಯೆಂದು ಬರೆದುಕೊಂಡಿದ್ದಾರೆ. ಕೆ.ಬಿ. ಸಿದ್ದಯ್ಯಗೆ ಇದ್ದ ಇಂತಹ ಅತಃಕರಣ ಪ್ರತಿಯೊಬ್ಬ ದಲಿತ ನಾಯಕರಲ್ಲಿಯೂ ಬರಬೇಕಿದೆ ಎಂದು ಅವರು ಹೇಳಿದರು.

ದಲಿತ ಸಮುದಾಯದ ಕುಲ ಪುರಾಣಗನ್ನು ಶೋಧನೆ ಮಾಡಿರುವ ಕೆ.ವಿ. ಸಿದ್ದಯ್ಯ, ಬಕಾಲ ಮುನಿ, ಜಾಂಬವಮುನಿ ಸೇರಿದಂತೆ ದಲಿತರ ಪುರಾಣ ಪುರುಷರ ಕುರಿತು ಕಾವ್ಯಗಳನ್ನು ರಚಿಸಿದ್ದಾರೆ. ಆ ಮೂಲಕ ದಲಿತ ಸಂಸ್ಕೃತಿಯ ಹಿರಿಮೆ-ಗರಿಮೆ ಅನಾವರಣಗೊಳಿಸಿದ ಮೊದಲ ಕವಿಯಾಗಿದ್ದಾರೆ. ಅವರ ಕಾವ್ಯಗಳು ದಲಿತ ಸಮುದಾಯಕ್ಕೆ ಹೊಸ ಪ್ರೇರಣೆಯನ್ನು ಒದಗಿಸಿದೆ ಎಂದು ಅವರು ಹೇಳಿದರು.

ಕೆ.ಬಿ.ಸಿದ್ದಯ್ಯ ಕೇವಲ ಕಾವ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ದಲಿತ ಸಮುದಾಯದ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಕುರಿತು ಹೋರಾಟ, ಜಾಗೃತಿಗೊಳಿಸುವಂತಹ ಕಾರ್ಯದಲ್ಲಿ ತೊಡಗಿದ್ದರು. ನೆಲಮಂಗಲದ ದಾಸನಪುರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೃಹತ್ ಹೋರಾಟವನ್ನು ರೂಪಿಸಿದವರು ಎಂದು ಅವರು ಸ್ಮರಿಸಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಲಿತ ಸಂಘಟನೆಯ ನಾಯಕರು 60ವರ್ಷಕ್ಕಿಂತ ಮೊದಲೇ ಸಾವನ್ನಪ್ಪುತ್ತಿರುವುದು ನೋವಿನ ಸಂಗತಿ. ದಲಿತ ನಾಯಕರು ತಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು. ನಾಯಕರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಹೋರಾಟವನ್ನು ಮುಂದುವರೆಸಲು ಸಾಧ್ಯವೆಂದು ತಿಳಿಸಿದರು.

ಕೆ.ಬಿ.ಸಿದ್ದಯ್ಯರವರ ಅಕಾಲಿಕ ಸಾವು ದಲಿತ ಸಮುದಾಯಕ್ಕೆ ಅಪಾರ ನೋವನ್ನು ತರಿಸಿದೆ. ಅವರು ಕವಿಯಾಗಿ, ಹೋರಾಟಗಾರರಾಗಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದರು. ಅವರ ಚಿಂತನೆ ಹಾದಿಯಲ್ಲಿ ನಾವೆಲ್ಲರೂ ಸಾಗೋಣವೆಂದು ಅವರು ಸ್ಮರಿಸಿದರು.

ದಲಿತ ಸಂಘಟನೆಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಮಾತನಾಡಿ, ತುಮಕೂರಿನಲ್ಲಿ ಅಹಿಂದ ಚಳವಳಿಯನ್ನು ಮುನ್ನಡೆಸಿದವರಲ್ಲಿ ಕೆ.ಬಿ.ಸಿದ್ದಯ್ಯ ಮೊದಲಿಗರಾಗಿ ನಿಲ್ಲುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಗುವುದಕ್ಕೆ ಕೆ.ಬಿ. ಸಿದ್ದಯ್ಯರವರ ಕೊಡುಗೆಯೂ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ.ಬಿ.ಕೆ.ಟ್ರಸ್ಟ್‌ನ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಮುಖಂಡರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಚನ್ನಕೃಷ್ಣ, ಅಣ್ಣಯ್ಯ, ಶಿವಾಜಿ ಗಣೇಶನ್ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಕೆ.ಬಿ.ಸಿದ್ದಯ್ಯರವರ ಹೋರಾಟದ ಕಥನ, ಕೆ.ಬಿ.ಕಾವ್ಯಾನುಸಂದಾನದ ಕುರಿತು ಕವಿ ಸುಬ್ಬುಹೊಲೆಯಾರ್ ಅಧ್ಯಕ್ಷತೆಯಲ್ಲಿ ಕಾವ್ಯ ಸಂವಾದವನ್ನು ಆಯೋಜಿಸಲಾಗಿತ್ತು. ನಂತರ ಜಾನಪದ ಹಾಡುಗಾರರಾದ ಬಾನಂದೂರು ಕೆಂಪಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ಅಪ್ಪಗೆರೆ ತಿಮ್ಮರಾಜು, ಗೊಲ್ಲಹಳ್ಳಿ ಶಿವಪ್ರಸಾದ್ ಹಾಡುಗಳ ಮೂಲಕ ಕೆ.ಬಿ.ಸಿದ್ದಯ್ಯರನ್ನು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News