ಬ್ಯಾಂಕಿಂಗ್ ವ್ಯವಸ್ಥೆ ಕಾರ್ಪೋರೇಟ್‌ಗಳ ಪರವಿದೆ: ಸರಕಾರಿ ನೌಕರರ ಒಕ್ಕೂಟದ ಪ್ರ.ಕಾರ್ಯದರ್ಶಿ ಜೈ ಕುಮಾರ್

Update: 2019-11-17 17:24 GMT

ಬೆಂಗಳೂರು, ನ.17: ಇಂದಿನ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಪೋರೇಟ್‌ಗಳ ಪರವಾಗಿದೆ ಎಂದು ಸರಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಜೈ ಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಆಯೋಜಿಸಿದ್ದ ಮೀಸಲಾತಿ: ನೂರು ವರ್ಷ ರಾಜ್ಯ ಸಮಾವೇಶದಲ್ಲಿ ಮುಕ್ತ ಆರ್ಥಿಖ ನೀತಿ ಮತ್ತು ಮೀಸಲಾತಿ ಪ್ರಶ್ನೆ ವಿಷಯದ ಕುರಿತು ವಿಚಾರ ಮಂಡನೆ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರದ ಬಳಿಕ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸ್ಥಾಪನೆ ಮಾಡಲಾಯಿತು. ಇದರಿಂದ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಾಕಷ್ಟು ಅನುಕೂಲವೂ ಆಯಿತು. ಇದು ದೇಶದ ಆರ್ಥಿಕತೆಯ ಮೇಲೆ ಗಾಢವಾದ ಪರಿಣಾಮವನ್ನೂ ಬೀರಿದೆ. ಆದರೆ, ಕಾರ್ಪೋರೇಟ್ ವ್ಯವಸ್ಥೆ, ಮುಕ್ತ ಆರ್ಥಿಕ ನೀತಿಗಳಿಂದ ಇಂದು ಬ್ಯಾಂಕಿಂಗ್ ಕ್ಷೇತ್ರ ಸಂಪೂರ್ಣವಾಗಿ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪ್ರಭಾವದಿಂದಾಗಿ ಇಂದು ದೇಶವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇವುಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದರ ಪರಿಣಾಮ ಸಣ್ಣ ಹಾಗೂ ಮಧ್ಯಮ ವರ್ಗದ ಜನರ ಮೇಲೆ ತೀವ್ರ ದಾಳಿಯನ್ನು ಮಾಡಿದೆ ಎಂದು ಅವರು ನುಡಿದರು.

ಜಾಗತಿಕ ಮಾರುಕಟ್ಟೆಯ ಪ್ರವೇಶದಿಂದ ಜಾತಿ ತಾರತಮ್ಯ ನಿರ್ಮೂಲನೆಯಾಗುತ್ತದೆ ಎಂದು ಹಬ್ಬಿಸಲಾಯಿತು. ಆದರೆ, ಅದು ಯಾವುದೇ ಪ್ರಭಾವವೂ ಬೀರಿಲ್ಲ. ಅದರ ಬದಲಿಗೆ, ಇಂದು ಒಂದು ಸಮುದಾಯದ ವ್ಯಕ್ತಿ ತಯಾರಿಸಿದ ವಸ್ತುಗಳನ್ನೇ ಕೊಂಡುಕೊಳ್ಳಲಾಗದ ಸ್ಥಿತಿಯಿದೆ. ಅಲ್ಲದೆ, ನಾವು ಕೊಡುವ ಕೆಲಸವೇ ಮಾಡಬೇಕು, ನಾವು ನೀಡಿದಷ್ಟೇ ಕೂಲಿ ಪಡೆಯಬೇಕು ಎಂಬಂತಾಗಿದೆ ಎಂದರು.

ದೇಶದಲ್ಲಿ ಇಂದಿನ ಉದ್ಯೋಗ ನೇಮಕಾತಿಗಳಲ್ಲಿ ಶೇ.65 ರಷ್ಟು ದಲಿತರನ್ನು, ಶೋಷಿತರನ್ನು ಸಂದರ್ಶನಕ್ಕೂ ಆಯ್ಕೆ ಮಾಡದಂತಹ ಸ್ಥಿತಿಯಿದೆ. ಇನ್ನೂ ಆದಾಯ ಗಳಿಕೆಯಲ್ಲಿಯೂ ಅತ್ಯಂತ ಕಳಪೆ ಸಾಧನೆ ಮಾಡುವಂತಾಗಿದೆ ಎಂದ ಅವರು, ದೇಶದ ಆರ್ಥಿಕತೆಯನ್ನು ಮೀಸಲಾತಿ ಆಧಾರದ ಮೇಲೆ ಕಾಣಬೇಕಿದೆ. ಆರ್ಥಿಕತೆ ಬೆಳಯಲು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಬೇಕಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News