ತುಳು ಭಾಷೆ ಸಂಸ್ಕೃತಿಯ ಪ್ರತಿರೂಪ: ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ್ ಶೆಟ್ಟಿ

Update: 2019-11-17 17:31 GMT

ಬೆಂಗಳೂರು, ನ 17: ತುಳು ಭಾಷೆ ಎನ್ನುವುದು ಕೇವಲ ಒಂದು ಭಾಷೆಯಲ್ಲ, ಅದು ಭಾರತೀಯ ಸಂಸ್ಕೃತಿಯ ಪ್ರತಿರೂಪ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ್ ಶೆಟ್ಟಿ ಹೇಳಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಬೆಂಗಳೂರು ತುಳುವರೆಂಕುಲು ಹಮ್ಮಿಕೊಂಡಿದ್ದ ಬಲಿಯೇಂದ್ರ ಪರ್ಬ ಆಚರಣೆ-ಬಲುಯೇಂದ್ರ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಳು ಭಾಷಿಕರು ತಮ್ಮ ಭಾಷೆ, ಸಂಪ್ರದಾಯ, ಸಂಸ್ಕೃತಿಯನ್ನು ಅರಿತುಕೊಂಡು ಉಳಿಸಿ-ಬೆಳಸಿ ಮುಂದಿನ ಪೀಳಿಗೆಯವರಿಗೆ ನೀಡಬೇಕು. ಇದರಿಂದ ಸಂಸ್ಕೃತಿ ಅರಿತುಕೊಳ್ಳುವುದರ ಜತೆಗೆ ಇತರೆ ಸಂಸ್ಕೃತಿ, ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಭಾರತ ದೇಶವೇ ವೈವಿಧ್ಯತೆಗಳ ಸಂಗಮದ ಬೀಡು. ಬಣ್ಣ, ಆಕಾರ, ಭಾಷೆ, ಉಡುಗೆ-ತೊಡುಗೆ, ಆಚಾರ-ವಿಚಾರ ಸಹಿತ ಪ್ರತಿಯೊಂದರಲ್ಲೂ ಅನೇಕತೆಗಳಿದ್ದರೂ, ಭಾರತೀಯರೆಲ್ಲರೂ ಒಂದು ಎನ್ನುವುದನ್ನು ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಬಲಿಯೇಂದ್ರ ಪ್ರಶಸ್ತಿಯನ್ನು ಉದ್ಯಮಿ ವಾಮನ ಸಾಲಿಯಾನ್, ಭವಾನಿ ಶಂಕರ್ ಶೆಟ್ಟಿ, ಯೋಗ ತಜ್ಞೆ ಡಾ.ಪ್ರವೀಣಾ ಗೋಪಾಲಕೃಷ್ಣಗೆ ನೀಡಿ ಗೌರವಿಸಲಾಯಿತು. ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ, ಹೋಟೆಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಪಿ.ಸಿ.ರಾವ್, ಉದ್ಯಮಿಗಳಾದ ಗಣೇಶ್ ರಾವ್, ದೇವೇಂದ್ರ ಹೆಗ್ಡೆ, ರಾಜೇಶ್ ಶೆಟ್ಟಿ, ಸುಂದರ್ ರೈ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News