ನಾಳೆಯಿಂದ 'ಬೆಂಗಳೂರು ಟೆಕ್ ಸಮ್ಮಿಟ್-2019'

Update: 2019-11-17 17:45 GMT

ಬೆಂಗಳೂರು, ನ. 17: ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ 2019ರ ನಾಳೆ(ನ.18)ಯಿಂದ ನ.20ರ ವರೆಗೆ ನಡೆಯಲಿದ್ದು, ಈ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. 

ರವಿವಾರ ಬೆಂಗಳೂರು ಟೆಕ್ ಸಮ್ಮಿಟ್ 2019ರ ಪೂರ್ವ ಭಾವಿ ಸಿದ್ಧತೆಗಳ ಸಭೆ ನಡೆಯಲಿರುವ ನಗರದ ಅರಮನೆ ಮೈದಾನದಲ್ಲಿ ಸಿದ್ಧತೆ ವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.18ರ ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಮ್ಮಿಟ್‌ನಲ್ಲಿ 3,500 ಪ್ರತಿನಿಧಿಗಳು ಭಾಗವಹಿಸಲಿದ್ದು, 200 ಉಪನ್ಯಾಸಕರು, 36 ಚರ್ಚಾಗೋಷ್ಠಿ, 200ಕ್ಕೂ ಹೆಚ್ಚಿನ ಪ್ರದರ್ಶಕರು ಆಗಮಿಸಿ ಐಟಿ-ಬಿಟಿ ಕ್ಷೇತ್ರದ ಬಗೆಗಿನ ಮಾಹಿತಿ ನೀಡಲಿದ್ದಾರೆ ಮತ್ತು ಪಡೆದುಕೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, 12 ಸಾವಿರಕ್ಕೂ ಹೆಚ್ಚಿನ ಜನರು ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಇನ್ನೋವೇಷನ್ ಮತ್ತು ಇಂಪ್ಯಾಕ್ಟ್ 2.0 ಘೋಷವಾಕ್ಯದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ರೋಬೋಟಿಕ್ ಪ್ರೀಮಿಯರ್ ಲೀಗ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ 9 ಯುನಿಕಾರ್ನ್ ಸಂಸ್ಥೆ ಸ್ಥಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಬಯೋ ಪ್ರಶಸ್ತಿ, ಬೆಂಗಳೂರು ಇಂಪ್ಯಾಕ್ಟ್ ಪ್ರಶಸ್ತಿಗಳ ಪ್ರದಾನ, ಗ್ರಾಮೀಣ ಯುವಕರಿಗಾಗಿ ಐಟಿ ಕ್ವಿಜ್ ಆಯೋಜನೆ, ಜೈವಿಕ ತಂತ್ರಜ್ಞಾನ ಕುರಿತ ರಸಪ್ರಶ್ನೆ, ಐಟಿ-ಬಿಟಿ, ಸ್ಟಾರ್ಟ್ ಅಪ್, ಟೆಕ್‌ಡ್ರೇಡ್ ಇನ್ನಿತರ ಕ್ಷೇತ್ರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದರಿಂದ, ಹೊಸ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಬೆಂಗಳೂರು ಪ್ರಗತಿಯಲ್ಲಿ 1ನೆ ಸ್ಥಾನಕ್ಕೆ ಏರಲಿದೆ ಎಂದು ಹೇಳಿದರು.

ಸೈಬರ್ ಅಥಾರಿಟಿ ಜಾರಿಗೆ ಚಿಂತನೆ: 21ನೆ ಶತಮಾನ ತಂತ್ರಜ್ಞಾನ ಯುಗವಾಗಿದ್ದು, ವಿಶ್ವದಲ್ಲಿಯೇ ಸೈಬರ್ ಕ್ರೈಂ ನಡೆಯುತ್ತಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಎಲ್ಲ ದೇಶಗಳ ಸರಕಾರಗಳು ಬಿಲಿಯನ್‌ಗಟ್ಟಲೇ ಹಣವನ್ನು ಖರ್ಚು ಮಾಡುತ್ತಿವೆ. ಹಾಗೆಯೇ ರಾಜ್ಯದಲ್ಲೂ ಸೈಬರ್ ಅಥಾರಿಟಿಯನ್ನು ಜಾರಿಗೆ ತಂದು ಇಲ್ಲಿಯೂ ಸೈಬರ್ ಕ್ರೈಂ ಅನ್ನು ನಿಯಂತ್ರಣಕ್ಕೆ ತರುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News