ಈ ಬಾರಿಯ ​ರಾಜ್ಯಸಭೆ ಅಧಿವೇಶನದ ವಿಶೇಷ ಏನು ಗೊತ್ತೇ ?

Update: 2019-11-18 03:39 GMT

ಹೊಸದಿಲ್ಲಿ: ರಾಜ್ಯಸಭೆಯ 250ನೇ ಅಧಿವೇಶನ ಸೋಮವಾರ ಆರಂಭವಾಗಲಿದೆ. 1952ರ ಮೇ ತಿಂಗಳಲ್ಲಿ ರಾಜ್ಯಸಭೆಯ ಮೊದಲ ಅಧಿವೇಶನ ನಡೆದ ಬಳಿಕ ಇಂದಿನವರೆಗೆ ರಾಜ್ಯಸಭೆ ನಡೆದು ಬಂದ ಹಾದಿಯ ಬಗ್ಗೆ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯಸಭೆ ನಡಸಿ ಶಾಸಕಾಂಗ ಕಾರ್ಯಗಳ ಗಾತ್ರ ಹಾಗೂ ವಿಶ್ಲೇಷಣೆಗೆ ಇದೇ ಮೊದಲ ಬಾರಿಗೆ ರಾಜ್ಯಸಭಾ ಕಾರ್ಯಾಲಯ ಪ್ರಯತ್ನ ನಡೆಸಿದ್ದು, 249ನೇ ಅಧಿವೇಶನದ ಕೊನೆಯ ವರೆಗೆ 3817 ಮಸೂದೆಗಳಿಗೆ ಒಪ್ಪಿಗೆ ನೀಡಿರುವುದನ್ನು ಉಲ್ಲೇಖಿಸಿದೆ. ಈ ಪೈಕಿ 60 ಮಸೂದೆಗಳು ಲೋಕಸಭೆಯ ವಿಸರ್ಜನೆ ಕಾರಣದಿಂದ ಅನೂರ್ಜಿತಗೊಂಡಿವೆ. 63 ಮಸೂದೆಗಳಿಗೆ ಮೇಲ್ಮನೆಯ ಅನುಮೋದನೆ ದೊರಕಿದೆ ಎಂದು ಪರಿಗಣಿಸಲಾಗಿದ್ದರೆ, ರಾಜ್ಯಸಭೆ ಅನುಮೋದನೆ ನೀಡಿದ ಎರಡು ಮಸೂದೆಗಳು ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ. ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆದ ಬಳಿಕ ಒಟ್ಟು 3818 ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ.

118 ಪುಟಗಳ ಈ ಪ್ರಕಟಣೆ 29 ಅಧ್ಯಾಯಗಳನ್ನು ಹೊಂದಿದ್ದು, ಇದು ರಾಜ್ಯಸಭೆಯ ಇತಿಹಾಸವನ್ನು ಬಿಂಬಿಸುತ್ತದೆ. ಸಾಮಾಜಿಕ ಬದಲಾವಣೆ, ಆರ್ಥಿಕ ಪ್ರಗತಿ, ಕೈಗಾರಿಕಾ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಕೃಷಿ, ಪರಿಸರ ಮತ್ತು ರಾಷ್ಟ್ರೀಯ ಭದ್ರತೆಯನ್ನು ರೂಪಿಸುವಲ್ಲಿ ರಾಜ್ಯಸಭೆ ವಹಿಸಿದ ಪಾತ್ರದ ಬಗ್ಗೆ ಇದು ವಿವರ ನೀಡುತ್ತದೆ. ಜತೆಗೆ ಸದನದ ಐತಿಹಾಸಿಕ ಶಾಸನಗಳು ಹಾಗೂ ಚರ್ಚೆಯ ಬಗ್ಗೆಯೂ ಉಲ್ಲೇಖಗಳನ್ನು ಒಳಗೊಂಡಿದೆ.

250ನೇ ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಅಧಿವೇಶನದಲ್ಲಿ ಮಧ್ಯಾಹ್ನದ ಬಳಿಕ "ಭಾರತೀಯ ರಾಜಕೀಯಲ್ಲಿ ರಾಜ್ಯಸಭೆಯ ಪಾತ್ರ: ಸುಧಾರಣೆಯ ಅಗತ್ಯತೆ" ಎಂಬ ವಿಷಯದ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗಿದೆ. ರಾಜ್ಯಸಭೆ ರೂಪುಗೊಂಡ ಸ್ಮರಣಸಂಚಿಕೆ, 250 ರೂ. ಮೌಲ್ಯದ ಬೆಳ್ಳಿ ನಾಣ್ಯ ಮತ್ತು 5 ರೂ. ಅಂಚೆ ಚೀಟಿ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News