ಕುಸಿದ ಆರ್ಥಿಕತೆಯ ಸಮತೋಲನಕ್ಕೆ ಹೆಣಗಾಡುತ್ತಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್

Update: 2019-11-18 14:07 GMT

ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕತೆ ಭಾರೀ ಹಿನ್ನಡೆಯನ್ನು ಅನುಭವಿಸಿದ್ದು, 5 ಟ್ರಿಲಿಯನ್ ಆರ್ಥಿಕತೆಯ ಗುರಿ ಕನಸಾಗಿ ಉಳಿಯುವ ಆತಂಕ ಎದುರಾಗಿದೆ. ಹಿಂದೆಂದಿಗಿಂತಲೂ ಸಂಕಷ್ಟದಲ್ಲಿರುವ ಆರ್ ಬಿಐ ಮತ್ತು ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದ ಸಮಸ್ಯೆಯನ್ನು ಸರಿದೂಗಿಸಲು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ www.bloomberg.com ನಲ್ಲಿ ಅನಿರ್ಬನ್ ನಾಗ್ ಅವರ ಲೇಖನ ಪ್ರಕಟಗೊಂಡಿದೆ. ಈ ಲೇಖನ ಮುಖ್ಯಾಂಶಗಳ ಕನ್ನಡ ಅನುವಾದ ಈ ಕೆಳಗಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆರ್‌ ಬಿಐ ಗವರ್ನರ್ ಆಗಿ ನೇಮಕಗೊಂಡ ಶಕ್ತಿಕಾಂತ ದಾಸ್ ಅವರು ಇತ್ತೀಚಿನವರೆಗೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯ ಉಸ್ತುವಾರಿ ಹೊಂದಿರುವುದರೊಂದಿಗೆ ಹದಗೆಟ್ಟಿದ್ದ ಆರ್‌ ಬಿಐ-ಸರಕಾರದ ನಡುವಿನ ಸಂಬಂಧವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಅವರ ಪೂರ್ವಾಧಿಕಾರಿಯಾಗಿದ್ದ ಉರ್ಜಿತ್ ಪಟೇಲ್ ಅವರು ಸರಕಾರದೊಡನೆ ಬಹಿರಂಗ ಹಗ್ಗಜಗ್ಗಾಟದ ಬಳಿಕ ಹುದ್ದೆಯಿಂದ ನಿರ್ಗಮಿಸಿದ್ದರು. ಶಕ್ತಿಕಾಂತ ದಾಸ್ ಸಂಜೆ ಕಚೇರಿಯಿಂದ ನಿರ್ಗಮಿಸುವಾಗ ಮನೆಯಲ್ಲಿ ಮುಂದುವರಿಸಲು ಕೆಲಸದ ಹೊರೆಯನ್ನು ಹೊತ್ತುಕೊಂಡೇ ತೆರಳುತ್ತಾರೆ ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ.

ದಾಸ್ ವಿತ್ತ ಸಚಿವಾಲಯಕ್ಕೆ ಭಾರೀ ಡಿವಿಡೆಂಡ್ ನೀಡಿದ್ದಾರೆ. ಹಲವಾರು ಉತ್ತೇಜಕ ಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಸಾಲ ವಿತರಿಸಲು ಬ್ಯಾಂಕುಗಳ ಮೇಲಿನ ನಿರ್ಬಂಧಗಳನ್ನೂ ಸಡಿಲಿಸಿದ್ದಾರೆ. ಉರ್ಜಿತ್ ಪಟೇಲ್ ಸರಕಾರದ ಒತ್ತಡವಿದ್ದರೂ ಇವುಗಳನ್ನು ಖಡಕ್ಕಾಗಿ ಪ್ರತಿರೋಧಿಸಿದ್ದರು. ಆದರೆ ಇನ್ನೂ ಆಗಬೇಕಾದ್ದು ಬಹಳಷ್ಟಿದೆ. ಆರ್ಥಿಕತೆಯು ಹಲವಾರು ಕ್ಷೇತ್ರಗಳಲ್ಲಿ ಕಾವು ಕಳೆದುಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರವು ಕೆಟ್ಟ ಸಾಲಗಳ ಬೃಹತ್ ಹೊರೆಯನ್ನು ಹೊರಲಾಗದೆ ಒದ್ದಾಡುತ್ತಿದೆ. ಇದರೊಂದಿಗೆ ಸರಕಾರದ ಹಣಕಾಸು ಗುರಿಗಳು ದಿನೇ ದಿನೇ ಜಾರುತ್ತಲೇ ಇವೆ.

ದಾಸ್ ಅವರ ಪೂರ್ವಾಧಿಕಾರಿಗಳಾಗಿದ್ದ ರಘುರಾಮ ರಾಜನ್ ಮತ್ತು ಉರ್ಜಿತ್ ಪಟೇಲ್ ಅವರು ಪರಸ್ಪರ ವಿರುದ್ಧ ವ್ಯಕ್ತಿತ್ವಗಳನ್ನು ಹೊಂದಿದ್ದರು. ರಾಜನ್ ವಿಶ್ವದ ಕೇಂದ್ರ ಬ್ಯಾಂಕುಗಳ ‘ರಾಕ್ ಸ್ಟಾರ್’ ಆಗಿದ್ದರೆ ಪಟೇಲ್ ಅವರು ಬ್ಯಾಂಕಿನೊಳಗೆ ಮತ್ತು ಹೊರಗೆ ಏಕಾಂತವನ್ನೇ ಬಯಸುತ್ತಿದ್ದರು. ಹಾಲಿ ಗವರ್ನರ್ ದಾಸ್ ಇವರೆಡೂ ವ್ಯಕ್ತಿತ್ವಗಳ ಸಮತೋಲನ ಹೊಂದಿದ್ದಾರೆ. ಅವರು ತನ್ನದೇ ಆದ ಟ್ವಿಟರ್ ಖಾತೆಯನ್ನು ಹೊಂದಿದ್ದು, ಮಾಧ್ಯಮಗಳಿಗೆ ಹೆಚ್ಚು ಮುಕ್ತವಾಗಿದ್ದಾರೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಾರೆ. ಆದರೆ 2014ರಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ತನ್ನ ನೀತಿಗಳು ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಕಡೆಗಣಿಸುತ್ತಿದ್ದಕ್ಕಾಗಿ ಅದನ್ನು ಟೀಕಿಸುವಲ್ಲಿ ಮುಂಚೂಣಿಯಲ್ಲಿರುವ ಮೂಲಕ ರಾಜನ್ ವಿಶ್ವ ಆರ್ಥಿಕ ರಂಗದಲ್ಲಿ ಪಡೆದಂತೆ ಪ್ರಸಿದ್ಧಿಯನ್ನು ಪಡೆಯಲು ದಾಸ್‌ಗೆ ಸಾಧ್ಯವಾಗಿಲ್ಲ.

ದಾಸ್ ಅವರ ಸಂವಹನ ಕೌಶಲ್ಯ ಆರ್‌ ಬಿಐ-ಸರಕಾರದ ನಡುವಿನ ಸಂಬಂಧವನ್ನು ಸುಧಾರಿಸುವಲ್ಲಿ ನೆರವಾಗಿದೆ. ಅವು ಈಗ ಬಹಿರಂಗವಾಗಿ ಕಚ್ಚಾಡಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ನಡುವಿನ ವಿವಾದಗಳನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಭಾರತದ ಪಾಲಿಗೆ ಪ್ರಪ್ರಥಮವಾಗುತ್ತಿದ್ದ ಸಾಗರೋತ್ತರ ಸಾವರಿನ್ ಬಾಂಡ್‌ ಗಳ ನೀಡಿಕೆಗಾಗಿ ವಿತ್ತ ಸಚಿವಾಲಯದ ಪ್ರಸ್ತಾವವನ್ನು ಆರ್‌ ಬಿಐ ಆಕ್ಷೇಪಿಸಿದ್ದು. ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಂತ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದ್ದು ಸದ್ಯಕ್ಕೆ ಅದು ಮೂಲೆ ಸೇರಿದೆ.

ಆರ್‌ ಬಿಐ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದು, ಅದರ ಮತ್ತು ಸರಕಾರದ ನಡುವಿನ ಸಂಘರ್ಷ ದೇಶದ ನೀತಿ ರೂಪಿಸುವಿಕೆಯಲ್ಲಿ ಪರಿಣಾಮ ಬೀರುತ್ತದೆ. ಹಣಕಾಸು ನೀತಿ, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಸನಿಹದಲ್ಲಿರುವ ವಿನಿಮಯ ದರ, ಬ್ಯಾಂಕುಗಳ ಮೇಲೆ ನಿಗಾ ಮತ್ತು ಸರಕಾರವು ತನ್ನ ಹೆಚ್ಚುತ್ತಿರುವ ಕೊರತೆಯನ್ನು ನೀಗಿಸಲು ನೆಚ್ಚಿಕೊಂಡಿರುವ ಬಾಂಡ್‌ ಗಳ ಮಾರಾಟ ಈ ಎಲ್ಲದರ ಜವಾಬ್ದಾರಿ ದಾಸ್ ಮೇಲಿದೆ. ವಿಶ್ವದ ಹೆಚ್ಚಿನ ಸೆಂಟ್ರಲ್ ಬ್ಯಾಂಕುಗಳು ಈ ಪೈಕಿ ಒಂದೋ ಎರಡೋ ಜವಾಬ್ದಾರಿಗಳನ್ನು ಮಾತ್ರ ಹೊಂದಿರುತ್ತವೆ.

ಆರ್‌ ಬಿಐ ಸ್ವಾತಂತ್ರ್ಯಕ್ಕಾಗಿ ಪಟೇಲ್ ನಡೆಸಿದ್ದ ಹೋರಾಟ ಅವರ ನಿರ್ಗಮನಕ್ಕೆ ಕಾರಣವಾಗಿತ್ತು. ಸರಕಾರಿ ಬ್ಯಾಂಕುಗಳಿಂದ ವ್ಯರ್ಥ ಸಾಲ ನೀಡಿಕೆಗೆ ಕಡಿವಾಣ ಹಾಕುವ ಮೂಲಕ ದೇಶದ ಹಣಕಾಸು ಕ್ಷೇತ್ರದ ಶುದ್ಧೀಕರಣದ ರಾಜನ್ ಪ್ರಯತ್ನಗಳನ್ನು ಮುಂದುವರಿಸಲು ಬಯಸಿದ್ದ ಪಟೇಲ್,ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆರ್‌ಬಿಐನ ಬ್ಯಾಲೆನ್ಸ್ ಶೀಟ್ ಸದೃಢವಾಗಿರುವಂತೆ ಮಾಡಲು ಆಸಕ್ತಿ ಹೊಂದಿದ್ದರು. ಆದರೆ 2018ರಲ್ಲಿ ಆರ್ಥಿಕತೆ ಮಂದಗೊಂಡು,ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿದ್ದಾಗ ಮೋದಿ ಸರಕಾರವು ಬೆಳವಣಿಗೆಯನ್ನು ಉತ್ತೇಜಿಸಲು ಸಾಲ ನೀಡುವಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸುವಂತೆ ಮತ್ತು ಆರ್‌ ಬಿಐ ಬಳಿಯಿರುವ ಹೆಚ್ಚುವರಿ ನಿಧಿಯನ್ನು ತನಗೆ ವರ್ಗಾಯಿಸುವಂತೆ ಅದರ ಮೇಲೆ ಒತ್ತಡ ಹೇರಿತ್ತು. ಡಿ.10ರಂದು ಪಟೇಲ್ ರಾಜೀನಾಮೆ ನೀಡಿದ್ದರು.

ನೂತನ ಆರ್‌ ಬಿಐ ಗವರ್ನರ್ ಆಗಿ ಡಿ.11ರಂದು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದಾಸ್ ಬದಲಾವಣೆಗಳಿಗೆ ನಾಂದಿ ಹಾಡಿದ್ದರು. ಜನವರಿ ಆರಂಭದಲ್ಲಿ ಕೈಗೊಂಡಿದ್ದ ಅವರ ಪ್ರಥಮ ನಿರ್ಧಾರಗಳಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಒತ್ತಡದಲ್ಲಿರುವ ಸಾಲಗಳನ್ನು ಪುನರ್‌ ರಚಿಸುವಂತೆ ಬ್ಯಾಂಕುಗಳಿಗೆ ಸೂಚನೆಯೂ ಒಂದಾಗಿತ್ತು. ತನ್ಮೂಲಕ ಕಾರ್ಪೊರೇಟ್ ಸಾಲಗಳನ್ನು ಪುನರ್‌ರಚಿಸದಿರುವ ಐದು ವರ್ಷಗಳ ಸಂಪ್ರದಾಯವನ್ನು ಅವರು ಮುರಿದಿದ್ದರು. ಇದರ ಹಿಂದೆಯೇ ಮೂರು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲ ನೀಡಿಕೆ ಮೇಲಿನ ನಿರ್ಬಂಧಗಳನ್ನು ಅವರು ಹಿಂದೆಗೆದುಕೊಂಡಿದ್ದರು.

ಬಡ್ಡಿದರ ಕಡಿತಕ್ಕೆ ಸರಕಾರವು ಒತ್ತಡ ಹೇರುತ್ತಿತ್ತಾದರೂ ರಾಜನ್ ಮತ್ತು ಪಟೇಲ್ ಅದಕ್ಕೆ ಮಣಿದಿರಲಿಲ್ಲ. ದಾಸ್ ಬಡ್ಡಿದರ ಕಡಿತಕ್ಕೆ ಹೆಬ್ಬಾಗಿಲನ್ನೇ ತೆರೆದಿದ್ದರು. ಈ ವರ್ಷದಲ್ಲಿ ಅವರು ಐದು ಬಾರಿ ಬಡ್ಡಿದರಗಳನ್ನ ಕಡಿತಗೊಳಿಸಿದ್ದು,ಒಟ್ಟು 135 ಮೂಲ ಅಂಕಗಳಷ್ಟು ಬಡ್ಡಿದರ ತಗ್ಗಿದೆ.

ಹಣದುಬ್ಬರ ಶೇ.4ರ ಮಧ್ಯಮಾವಧಿಯ ಆರ್‌ ಬಿಐ ಅಂದಾಜನ್ನು ಮೀರಿದೆ. ಜನವರಿಯಲ್ಲಿ ಶೇ.2ರಷ್ಟಿದ್ದ ಬಳಕೆದಾರ ಬೆಲೆ ಸೂಚಿಯು ಅಕ್ಟೋಬರ್‌ನಲ್ಲಿ ಶೇ.4.6ಕ್ಕೇರಿದೆ. ಬೆಲೆ ಏರಿಕೆಗಳ ಹೊರತಾಗಿಯೂ ದಾಸ್ ಅವರು ದರಕಡಿತವನ್ನು ಮುಂದುವರಿಸಲಿದ್ದಾರೆ ಮತ್ತು 2020,ಮಾರ್ಚ್ ವೇಳೆಗೆ ಬಡ್ಡಿದರ ಶೇ.4.9ಕ್ಕೆ ಇಳಿಯಬಹುದು ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಪ್ರಸಕ್ತ ಆರ್ಥಿಕ ಹಿಂಜರಿತವು ನಿಜಕ್ಕೂ ಸರಕಾರದ ಆರ್ಥಿಕ ನೀತಿಯನ್ನು ಎತ್ತಿ ಹಿಡಿಯುವ ದಾಸ್ ಅವರ ಸಾಮರ್ಥ್ಯಕ್ಕೆ ಸವಾಲನ್ನೊಡ್ಡಿದೆ. ಆರ್ಥಿಕ ಮಂದಗತಿಯನ್ನು ತಡೆಯಲು ಅವರ ಆರ್‌ ಬಿಐ ಯಾವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News