ಈ ಕಷಾಯದಲ್ಲಿ ಅಡಗಿದೆ ನಿಮ್ಮೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ !

Update: 2019-11-18 14:12 GMT
ಸಾಂದರ್ಭಿಕ ಚಿತ್ರ

ಭಾರತೀಯ ಅಡುಗೆ ಮನೆಯಲ್ಲಿ ಅಗತ್ಯ ವಸ್ತುವಾಗಿರುವ ಬೆಳ್ಳುಳ್ಳಿ ಆಹಾರದ ರುಚಿ ಮತ್ತು ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ,ಅದು ನಿಮ್ಮ ಆರೋಗ್ಯಕ್ಕೂ ಹಲವಾರು ವಿಧಗಳಲ್ಲಿ ರಕ್ಷಣೆ ನೀಡುತ್ತದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದು ಒಳ್ಳೆಯದು. ಆದರೆ ಬೆಳ್ಳುಳ್ಳಿಯ ಘಾಟು ವಾಸನೆ ಮತ್ತು ತೀಕ್ಷ್ಣ ರುಚಿಯಿಂದಾಗಿ ಅದನ್ನು ಹಸಿಯಾಗಿ ತಿನ್ನುವುದು ಹೆಚ್ಚಿನವರಿಗೆ ಕಷ್ಟವಾಗಬಹುದು. ಬೆಳ್ಳುಳ್ಳಿಯ ಕಷಾಯ ಈ ಕಷ್ಟವನ್ನು ನೀಗಿಸಬಲ್ಲದು. ಇದು ಹಸಿ ಬೆಳ್ಳುಳ್ಳಿಯಲ್ಲಿನ ಎಲ್ಲ ಪೋಷಕಾಂಷಗಳನ್ನು,ಅದರ ತೀಕ್ಷ್ಣ ರುಚಿಯನ್ನು ಸಹಿಸುವ ಕಷ್ಟವಿಲ್ಲದೆ ಒದಗಿಸುತ್ತದೆ.

ಬೆಳ್ಳುಳ್ಳಿ ಕಷಾಯ ತಯಾರಿಸುವುದು ಹೇಗೆ?

ಅಗತ್ಯ ಸಾಮಗ್ರಿಗಳು: ಒಂದು ಬೆಳ್ಳುಳ್ಳಿ ಎಸಳು,ತುರಿದ ಶುಂಠಿ,ಒಂದು ಚಮಚ ಜೇನು,ಒಂದು ಚಮಚ ಲಿಂಬೆರಸ

ಒಂದು ಗ್ಲಾಸ್‌ನಷ್ಟು ನೀರನ್ನು ಕುದಿಸಿ ಅದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿ. ಈಗ ಸುಮಾರು 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿದ ಬಳಿಕ ಸ್ಟವ್‌ನಿಂದ ಕೆಳಗಿಳಿಸಿ 10 ನಿಮಿಷಗಳ ಕಾಲ ಆರಲು ಬಿಡಿ. ಇದಕ್ಕೆ ನಿಮ್ಮ ರುಚಿಗೆ ಅನುಗುಣವಾಗಿ ಜೇನು ಮತ್ತು ಲಿಂಬೆರಸವನ್ನು ಬೆರೆಸಿದರೆ ಬೆಳ್ಳುಳ್ಳಿ ಕಷಾಯ ಸಿದ್ಧ. ಅದು ಬೆಚ್ಚಗಿರುವಾಗಲೇ ಖಾಲಿಹೊಟ್ಟೆಯಲ್ಲಿ ಕುಡಿದುಬಿಡಿ.

ಬೆಳ್ಳುಳ್ಳಿ ಕಷಾಯದ ಆರೋಗ್ಯ ಲಾಭಗಳು

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಕಷಾಯ ಕುಡಿದ ಬಳಿಕ ಶರೀರದಲ್ಲಿ ಚಯಾಪಚಯ ಪ್ರಕ್ರಿಯೆ ಹೆಚ್ಚುತ್ತದೆ ಮತ್ತು ಇದು ಜೀರ್ಣಾಂಗವನ್ನು ಉತ್ತೇಜಿಸುತ್ತದೆ. ಇದರಿಂದ ಜಠರಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ. ಈ ಕಷಾಯವು ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳನ್ನೂ ತಗ್ಗಿಸುತ್ತದೆ.

ಬೆಳ್ಳುಳ್ಳಿ ಕಷಾಯದ ಸೇವನೆಯಿಂದ ಶರೀರದಲ್ಲಿಯ ವಿಷವಸ್ತುಗಳು ನಿವಾರಣೆಯಾಗುತ್ತವೆ. ಅಲ್ಲದೆ ಶರೀರದ ವಿವಿಧ ಭಾಗಗಳಲ್ಲಿ ಸೇರಿಕೊಂಡಿರುವ ಹೆಚ್ಚುವರಿ ಕೊಬ್ಬು ಸಹ ಕರಗುತ್ತದೆ. ನೀವು ನಿಮ್ಮ ದಿನವನ್ನು ಬೆಳ್ಳುಳ್ಳಿ ಕಷಾಯದ ಸೇವನೆಯಿಂದ ಆರಂಭಿಸುವುದಕ್ಕೆ ಇನ್ನಷ್ಟು ಕಾರಣಗಳಿಲ್ಲಿವೆ.

ಈ ಕಷಾಯದ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಶರೀರವು ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವವರಿಗೆ ಬೆಳ್ಳುಳ್ಳಿ ಕಷಾಯವು ಒಂದು ವರದಾನ ಎನ್ನಬಹುದು, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಜೊತೆಗೆ ಮಧುಮೇಹದ ಅಪಾಯವನ್ನೂ ತಡೆಯುತ್ತದೆ.

ಕಷಾಯದಲ್ಲಿರುವ ಆ್ಯಂಟಿಬಯಾಟಿಕ್‌ಗಳು ಶೀತ,ಫ್ಲೂ ಮತ್ತು ಕೆಮ್ಮಿನಂತಹ ಸಮಸ್ಯೆಗಳ ಪರಿಣಾಮಗಳನ್ನು ತಗ್ಗಿಸುತ್ತವೆ. ಬೆಳ್ಳುಳ್ಳಿಯ ಆರೋಗ್ಯಲಾಭಗಳು

ಬೆಳ್ಳುಳ್ಳಿಯು ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಲಾಭದಾಯಕವಾಗಿದೆ. ರಕ್ತ ಪರಿಚಲನೆಯನ್ನು ನಿಯಂತ್ರಿಸುವುದು ಮಾತ್ರವಲ್ಲ,ವಿವಿಧ ಹೃದಯನಾಳೀಯ ಸಮಸ್ಯೆಗಳನ್ನೂ ತಡೆಯುತ್ತದೆ. ಯಕೃತ್ತು ಮತ್ತು ಮೂತ್ರಕೋಶಗಳೂ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತವೆ.

ಅತಿಸಾರದಂತಹ ಉದರ ಸಮಸ್ಯೆಗಳಿಗೂ ಬೆಳ್ಳುಳ್ಳಿ ಪರಿಣಾಮಕಾರಿಯಾಗಿದೆ. ನರಗಳ ಸಮಸ್ಯೆಗೂ ಇದು ಅದ್ಭುತ ಮನೆಮದ್ದಾಗಿದೆ,ಆದರೆ ಖಾಲಿ ಹೊಟ್ಟೆಯಲ್ಲಿ ತಿಂದಾಗ ಮಾತ್ರ. ಬೆಳ್ಳುಳ್ಳಿಯು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಹೊಟ್ಟೆ ಬಿಗಿತವನ್ನು ನಿಯಂತ್ರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News