ನ್ಯಾಯಾಲಯ ‘ಅನರ್ಹರು’ ಎಂದವರಿಗೆ ಇನ್ನು ಜನತಾ ನ್ಯಾಯಾಲಯ ತೀರ್ಪು ಕೊಡಲಿದೆ: ಸಿದ್ದರಾಮಯ್ಯ

Update: 2019-11-18 15:35 GMT

ಬೆಂಗಳೂರು, ನ.18: ಮತದಾರರಿಗೆ ದ್ರೋಹ ಬಗೆದವರಿಗೆ ನ್ಯಾಯಾಲಯ ‘ಅನರ್ಹರು’ ಎಂದು ತೀರ್ಪು ಕೊಟ್ಟಿದೆ. ಈಗ ಜನತಾ ನ್ಯಾಯಾಲಯದಲ್ಲಿ ಅವರಿಗೆ ತೀರ್ಪು ಕೊಡುವ ಸಮಯ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇವತ್ತು ಕೆ.ಆರ್.ಪುರ ಅಭಿವೃದ್ಧಿಯಾಗಿದೆ ಎಂದರೆ ಅದು ನಾನು ಕೊಟ್ಟಿರುವ ಸಾವಿರಾರು ಕೋಟಿ ರೂ.ಅನುದಾನದಿಂದಲೇ ಹೊರತು, ಭೈರತಿ ಬಸವರಾಜ ಅವರಿಂದ ಅಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದು ಸರಿಯೇ ಮಿಸ್ಟರ್ ಬಸವರಾಜ್? 2013ರಲ್ಲಿ ಎ.ಕೃಷ್ಣಪ್ಪ ಅವರ ಬದಲಾಗಿ ಬಸವರಾಜ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ನಾನು. ಒಂದು ವೇಳೆ ಅವತ್ತು ನಾನು ಟಿಕೆಟ್ ಕೊಡಿಸದೇ ಇದ್ದಿದ್ದರೆ, ಈ ಜನ್ಮದಲ್ಲಿ ಬಸವರಾಜ್ ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಮತದಾರರನ್ನು ಕೇಳಿದ್ರಾ? ಜನರಿಗೆ, ನನಗೆ, ಕಾಂಗ್ರೆಸ್ ಪಕ್ಷಕ್ಕೆ, ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ದ್ರೋಹ ಮಾಡಿ ಬಿಜೆಪಿ ಬಾವುಟ ಹಿಡಿದಿರುವ ಬಸವರಾಜ್‌ಗೆ ನಾಚಿಕೆ ಆಗುವುದಿಲ್ಲವೇ? ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕಾಂಗ್ರೆಸ್ ಪಕ್ಷವನ್ನು ಬಿಡಬಾರದಿತ್ತು ಎಂದು ಅವರು ಹೇಳಿದರು.

ಪಕ್ಷಾಂತರಿಗಳನ್ನು ಜನ ಕ್ಷಮಿಸಲ್ಲ: ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಜನ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಅದೇ ರೀತಿ ಕೆ.ಆರ್.ಪುರ ಕ್ಷೇತ್ರದ ಮತದಾರರು ಪಕ್ಷಾಂತರ ಮಾಡಿದ ಬಸವರಾಜ್‌ಗೆ ಕ್ಷಮಿಸಲ್ಲ. ಠೇವಣಿ ಸಿಗದಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಅಮಿತ್ ಶಾ ಹಿಂಬಾಲಿನಿಂದ ಅಧಿಕಾರ ಮಾಡಿದ್ದಾರೆ. ಯಡಿಯೂರಪ್ಪ ಅನೈತಿಕ ಸರಕಾರದ ಮುಖ್ಯಮಂತ್ರಿ ಆಗಿದ್ದಾರೆ. ಇವರಿಬ್ಬರೂ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹಾಳು ಮಾಡಿದ್ದಾರೆ. ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಓಡಿ ಹೋಗಿರುವವರು ಮತ್ತೆ ಶಾಸಕರಾಗಬೇಕೇ? ಬಸವರಾಜ್ ರಾಜೀನಾಮೆ ಕೊಡಲು ಓಡಿ ಹೋಗಿದ್ದನ್ನು ಯಾರೂ ಮರೆಯುವುದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಯಡಿಯೂರಪ್ಪ, ಅಮಿತ್ ಶಾ ನೇರವಾಗಿ ಹಣ, ಅಧಿಕಾರದ ಆಮಿಷವೊಡ್ಡಿ ನಮ್ಮ ಶಾಸಕರನ್ನು ಕುದುರೆ ವ್ಯಾಪಾರ ಮಾಡಿ ಖರೀದಿಸಿದ್ದಾರೆ. ಕೆ.ಆರ್.ಪುರದಲ್ಲಿ ಬಸವ(ಬಸವರಾಜ್), ನಂದಿ(ನಂದೀಶ್ ರೆಡ್ಡಿ) ಜೋಡೆತ್ತು ಎಂದು ಆರ್.ಅಶೋಕ್ ಹೇಳುತ್ತಿದ್ದಾರೆ. ಈ ಬಸವ, ನಂದಿಯನ್ನು ಇಲ್ಲಿಂದ ಓಡಿಸುವವರು ಮತದಾರರು ಎಂದು ಅವರು ತಿಳಿಸಿದರು.

ಯಡಿಯೂರಪ್ಪ ಈವರೆಗಿನ ಅತ್ಯಂತ ದುರ್ಬಲ ಮುಖ್ಯಮಂತ್ರಿ(ಹೀ ಈಸ್ ದಿ ವೀಕ್ ಸಿಎಂ ಎವರ್). ಆತ ಏನು ಕೆಲಸ ಮಾಡುತ್ತಿಲ್ಲ. ಕೇವಲ ಲೂಟಿ ಹೊಡೆದು ಕೊಂಡು ಕೂತಿದ್ದಾನೆ. ನಾವು ಟಿಪ್ಪು ಜಯಂತಿ ಮಾಡಿದೆವು. ಯಡಿಯೂರಪ್ಪ ಅದನ್ನು ನಿಲ್ಲಿಸಿದರು. ಇದೇ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಪೇಟ ಹಾಕಿಕೊಂಡು, ಅವರನ್ನು ಹಾಡಿ ಹೊಗಳಿದ್ದರು. ಇದು ಯಡಿಯೂರಪ್ಪ ಇಬ್ಬಗೆ ನೀತಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕೆಂಪೇಗೌಡ, ಮಲ್ಲಮ್ಮ, ಕಿತ್ತೂರು ರಾಣಿ ಚನ್ನಮ್ಮ, ವಾಲ್ಮೀಕಿ, ಶ್ರೀಕೃಷ್ಣ ಜಯಂತಿಯನ್ನು ಮಾಡಿದ್ದು ನಾವು. ಬಿಜೆಪಿಯವರು ಏನು ಮಾಡಿದ್ದಾರೆ. ಇವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆಯೇ ಬಿದ್ದು ಹೋಗಿದೆ. ಇದಕ್ಕೆಲ್ಲ ನರೇಂದ್ರ ಮೋದಿ ಕಾರಣ ಎಂದು ಅವರು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿಗೆ ಮತ ಹಾಕುವ ಮೂಲಕ ಈ ಕ್ಷೇತ್ರದ ಸ್ವಾಭಿಮಾನ ಕಾಪಾಡಿ. ನಾನು ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ನಡೆಸಿದೆ. ನನ್ನ ಮೇಲೆ ಯಾವುದಾದರು ಕಳಂಕ ಇದೆಯಾ? ಇಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹೋರಾಟ ಎಂದು ಸಿದ್ದರಾಮಯ್ಯ ಹೇಳಿದರು.

ಅನರ್ಹರು ಜೀವನ ಪರ್ಯಂತ ಅನರ್ಹರಾಗೇ ಇರಬೇಕು. ಡಿಸೆಂಬರ್ 5ರಂದು ಮತದಾರರು ತಕ್ಕ ಪಾಠ ಕಲಿಸಬೇಕು. ಇವತ್ತು ನಮ್ಮ ಅಭ್ಯರ್ಥಿ ನಾರಾಯಣಸ್ವಾಮಿ ಬೆಂಬಲಿಸಲು ಸ್ವಯಂಪ್ರೇರಣೆಯಿಂದ ಸಾವಿರಾರು ಮಂದಿ ಬಂದಿದ್ದೀರ. ನಿಮ್ಮ ಹುರುಪು ನೋಡಿದರೆ ನಾರಾಯಣಸ್ವಾಮಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಬಿಬಿಎಂಪಿ ಸದಸ್ಯೆ ರಾಧಮ್ಮ ವೆಂಕಟೇಶ್, ಕೆ.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News