15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು: ಅರವಿಂದ ಲಿಂಬಾವಳಿ

Update: 2019-11-18 17:21 GMT

ಬೆಂಗಳೂರು, ನ.18: ಕೆ.ಆರ್.ಪುರ ಅಷ್ಟೇ ಅಲ್ಲ ಉಪ ಚುನಾವಣೆ ನಡೆಯುತ್ತಿರುವ ರಾಜ್ಯದ ಎಲ್ಲ 15 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಅದು ಅನರ್ಹತೆಯಲ್ಲ, ರಾಜಕೀಯ ಧೃವೀಕರಣ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದರು.

ಸೋಮವಾರ ಕೆ.ಆರ್.ಪುರದಲ್ಲಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಧರಂಸಿಂಗ್ ಸರಕಾರದ ವೇಳೆ ತಪ್ಪಾಗಿ ನಡೆದುಕೊಂಡಿದ್ದು ಯಾರು? ಯಡಿಯೂರಪ್ಪ ಜೊತೆ ಮೈತ್ರಿ ಸರಕಾರದ ವೇಳೆ ಅಧಿಕಾರ ನೀಡದೇ ವಚನ ಭ್ರಷ್ಟರಾಗಿದ್ದು ಇದೇ ಎಚ್.ಡಿ.ಕುಮಾರಸ್ವಾಮಿ ಎಂದು ದೂರಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡು ಹೋಗಿದ್ದರೆ, ಇವತ್ತು ಈ ಉಪ ಚುನಾವಣೆಯ ಪರಿಸ್ಥಿತಿ ನಿರ್ಮಾಣ ವಾಗುತ್ತಿರಲಿಲ್ಲ. ಕುಮಾರಸ್ವಾಮಿ ಆಡಳಿತದಿಂದ ಬೇಸತ್ತು ಈ ಶಾಸಕರು ರಾಜೀನಾಮೆ ನೀಡಿದ್ದರು ಎಂದು ಅರವಿಂದ ಲಿಂಬಾವಳಿ ಹೇಳಿದರು.

ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್, ಕೆ.ಆರ್.ಪುರ ಕ್ಷೇತ್ರದಲ್ಲಿ ನೂರಕ್ಕೆ ನೂರು ನಾನು ಗೆಲುವು ಸಾಧಿಸುತ್ತೇನೆ. ಜನ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ. ಅವರು ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಪಕ್ಷದ ಬಗ್ಗೆ ನಿಷ್ಠೆ ಹೊಂದಿರುತ್ತೇನೆ. ಬೇರೆಯವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕ್ಷೇತ್ರದ ಜನ ನನಗೆ ಮುಖ್ಯ. ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಅನ್ನೋದು ಡಿಸೆಂಬರ್ 5ರಂದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನಗೆ ಅಧಿಕಾರ ಮುಖ್ಯ ಅಲ್ಲ. ಕ್ಷೇತ್ರದ ಅಭಿವೃದ್ಧಿ ಮಾತ್ರ ನನಗೆ ಮುಖ್ಯ. ಜನ ಆಶೀರ್ವಾದ ಮಾಡೋವರೆಗೂ ನಾನು ಜನರ ಸೇವೆ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಸಮರ್ಥ ಅಭ್ಯರ್ಥಿಗಳಿಲ್ಲದೇ ಹತಾಶರಾಗಿದ್ದಾರೆ. ಈ ಬಾರಿಯೂ ಗೆಲುವು ನಮ್ಮದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ನಾನು ವಿಷಕಂಠನಾಗಿದ್ದೇನೆ ಎಂದಿದ್ದರು. ವಿಷಕೊಟ್ಟವರು ಇದೇ ಕಾಂಗ್ರೆಸ್‌ನವರು. ಪ್ರತಿದಿನ ಅವರಿಗೆ ಸ್ಲೋ ಪಾಯ್ಸಿನ್ ಕೊಡುತ್ತಿದ್ದರು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಭೈರತಿ ಬಸವರಾಜ್ ನಾಮಪತ್ರ ಸಲ್ಲಿಕೆ

ಕೆ.ಆರ್.ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭೈರತಿ ಬಸವರಾಜ್ ತಮ್ಮ ಸಾವಿರಾರು ಬೆಂಬಲಿಗರ ಜೊತೆ ಮೆರವಣಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ, ವಸತಿ ಸಚಿವ ವಿ.ಸೋಮಣ್ಣ, ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಎಂ.ಎನ್.ಶ್ರೀಕಾಂತ್ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಗೆ ಮುನ್ನ ಇಲ್ಲಿನ ಭಟ್ಟರಹಳ್ಳಿಯಲ್ಲಿರುವ ಭಕ್ತ ಆಂಜನೇಯ ಸ್ವಾಮಿ ದೇಸ್ಥಾನದಲ್ಲಿ ಬಸವರಾಜ್ ಕುಟುಂಬ ಸದಸ್ಯರು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಸಚಿವ ಆರ್.ಅಶೋಕ್, ಅನರ್ಹ ಶಾಸಕ ಮುನಿರತ್ನ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News