ಅಕ್ರಮ ಕಟ್ಟಡ ನಿರ್ಮಾಣ ವಿಚಾರ: ಅಧಿಕಾರಿಗಳನ್ನು ಶಿಕ್ಷಿಸಲು ಹೊಸ ನಿಯಮ ಜಾರಿ

Update: 2019-11-18 18:09 GMT

ಬೆಂಗಳೂರು, ನ.18: ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಪೌರ ನಿಯಮ ಕಾಯ್ದೆ-1976ರ ಸೆಕ್ಷನ್ 321 ಬಿ ಪ್ರಕಾರ ದಂಡ ಪ್ರಮಾಣ ನಿಗದಿಪಡಿಸಿ ರಾಜ್ಯ ಸರಕಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಸರಕಾರಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. 

ಪ್ರಕರಣ ಸಂಬಂಧ ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರಿ ವಕೀಲ ಅಚ್ಚಪ್ಪಈ ಮಾಹಿತಿ ನೀಡಿದರು. ಜೊತೆಗೆ ಕರ್ನಾಟಕ ಪೌರ ನಿಗಮಗಳು ನಿಯಮಗಳು-2019ರ ಕರಡು ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಹೈಕೋರ್ಟ್ ಆದೇಶದಂತೆ ಅ.3ರಂದು ಪರಿಷ್ಕೃತ ಕರಡು ನಿಯಮ ರೂಪಿಸಲಾಗಿದ್ದು, ಅ.4ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಕರಡು ನಿಯಮಗಳು ಬಿಬಿಎಂಪಿ ಸೇರಿದಂತೆ ಪಾಲಿಕೆಗಳಿಗೆ ಅನ್ವಯವಾಗಲಿದೆ.

ಪುರಸಭೆ ಅಧಿಕಾರಿಗಳ ದಂಡ ಇಂತಿವೆ: ಮೊದಲ ಬಾರಿಗೆ ತಪ್ಪುಮಾಡಿದ ಅಧಿಕಾರಿಗಳಿಗೆ ರೂ.10 ಸಾವಿರಕ್ಕಿಂತಲೂ ಕಡಿಮೆಯಿಲ್ಲ ಆದರೆ, ರೂ.25 ಸಾವಿರಕ್ಕಿಂತಲೂ ಹೆಚ್ಚಿಲ್ಲ. ಎರಡನೇ ಬಾರಿ ತಪ್ಪು ಮಾಡಿದ ಅಧಿಕಾರಿಗಳಿಗೆ 25ಸಾವಿರಕ್ಕಿಂತಲೂ ಕಡಿಮೆಯಿಲ್ಲ 50 ಸಾವಿರಕ್ಕಿಂತಲೂ ಹೆಚ್ಚು ದಂಡವಿಲ್ಲ. 3 ಬಾರಿಯೂ ತಪ್ಪುಮಾಡಿದ ಅಧಿಕಾರಿಗಳ ವಿರುದ್ಧ ನಿಯಮಗಳ ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಸೆಕ್ಷನ್ 342ರ ಅಡಿಯಲ್ಲಿ ಮುಖ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ನಿಗಮದ ಅಧಿಕಾರಿಗಳ ದಂಡ ಇಂತಿವೆ: ಮೊದಲ ಬಾರಿಗೆ ತಪ್ಪು ಮಾಡಿದವರಿಗೆ 25 ಸಾವಿರಕ್ಕಿಂತಲೂ ಕಡಿಮೆಯಿಲ್ಲ 50 ಸಾವಿರಕ್ಕಿಂತಲೂ ಹೆಚ್ಚು ದಂಡವಿಲ್ಲ. 2 ಬಾರಿ ತಪ್ಪು ಮಾಡಿದವರಿಗೆ 50 ಸಾವಿರಕ್ಕಿಂತಲೂ ಕಡಿಮೆಯಿಲ್ಲ 1 ಲಕ್ಷಕ್ಕಿಂತಲೂ ಹೆಚ್ಚು ದಂಡವಿಲ್ಲ. 3 ಬಾರಿ ಮಾಡಿದರೆ, ನಿಯಮಗಳ ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಸೆಕ್ಷನ್ 90 ಕೆಎಂಸಿ ಕಾಯ್ದೆಯನ್ವಯ ಆಯುಕ್ತರು ಕ್ರಮ ಕೈಗೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News