ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲು ಶಿಫಾರಸ್ಸು

Update: 2019-11-18 18:19 GMT

ಬೆಂಗಳೂರು, ನ.18: ಬಿಬಿಎಂಪಿ ವ್ಯಾಪ್ತಿಯ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುತ್ತಿದ್ದಂತೆ, ಬೆಂಬಲಿಗ ಪಾಲಿಕೆ ಸದಸ್ಯರೂ, ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅನರ್ಹ ಶಾಸಕರ ಜತೆ ಗುರುತಿಸಿಕೊಂಡಿರುವ ಬಿಬಿಎಂಪಿ ಸದಸ್ಯರನ್ನು ಪಕ್ಷದಿಂದ ಹಾಗೂ ಸದಸ್ಯತ್ವದಿಂದ ಉಚ್ಚಾಟಿಸಲು ಶಿಫಾರಸ್ಸು ಮಾಡುವುದಾಗಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯರಾದ ಎಂ.ಎನ್. ಶ್ರೀಕಾಂತ್, ವಿ.ಸುರೇಶ್, ಎನ್. ಮಂಜುನಾಥ್, ಬಿ.ಎನ್ ಜಯಪ್ರಕಾಶ್, ಆರ್ಯ ಶ್ರೀನಿವಾಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆಯಲಾಗುವುದು. ಉಚ್ಚಾಟನೆ ನಂತರ ಬಿಬಿಎಂಪಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.

ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ದೊಡ್ಡಿಹಾಳ್ ನೇತೃತ್ವದ ಸಮಿತಿ ತನಿಖೆ ನಡೆಸಿ ಸದರಿ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ವರದಿ ನೀಡಿದೆ. ಅನಗತ್ಯ ಆರೋಪ ಮಾಡಿದ ಎನ್.ಆರ್. ರಮೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬೆಂಗಳೂರು ನಾಗರಿಕರನ್ನು ರಮೇಶ್ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು. ಬಿಜೆಪಿಯವರು ನಮ್ಮ ಸರಕಾರವನ್ನು ಈ ಹಿಂದೆ 10ಪರ್ಸೆಂಟ್ ಸರಕಾರ ಎಂದು ಆರೋಪ ಮಾಡಿದ್ದರು. ಈ ಆರೋಪ ಸತ್ಯಕ್ಕೆ ದೂರವಾದದು. ಆದರೆ ಬಿಜೆಪಿ ಸರಕಾರವೇ ಲೂಟಿ ಸರಕಾರವಾಗಿದೆ, ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುವ ಬಿಜೆಪಿ ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳನ್ನು ಬ್ಲಾಕ್ ಟಾಪಿಂಗ್ ಯೋಜನೆಯಡಿ ಅಭಿವೃದ್ಧಿಪಡಿಸಲು ಮುಂದಾಗಿ ಕಿ.ಮೀ. ಒಂದಕ್ಕೆ 14ರಿಂದ 15 ಕೋಟಿಗಳನ್ನು ನಿಗದಿ ಪಡಿಸಲಾಗಿದೆ ಎಂದು ಆರೋಪಿಸಿದರು.

ಬ್ಲಾಕ್ ಟಾಪಿಂಗ್ ಕಾಮಗಾರಿ ರಸ್ತೆಗಳು ಕೇವಲ ಒಂದು ವರ್ಷ ಬಾಳಿಕೆ ಬರುತ್ತವೆ. ಕಿ.ಮೀ.ಗೆ 15 ಕೋಟಿ ವೆಚ್ಚವಾಗುತ್ತದೆ. ಆದರೆ, ವೈಟ್ ಟಾಪಿಂಗ್ ಕಾಮಗಾರಿ ಒಂದು ಕಿ.ಮೀ.ಗೆ ಕೇವಲ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆಗಳು ಸುಮಾರು 10 ವರ್ಷ ಬಾಳಿಕೆ ಬರುತ್ತವೆ. ಯಾವುದು ಲೂಟಿ ಸರಕಾರ ಎಂದು ಪ್ರಶ್ನಿಸಿದರು.

ಅಲ್ಲದೆ, ಬಸ್‌ಲೈನ್ ಕಾರಿಡಾರ್ ಕಾಮಗಾರಿ ಅನಾಮಧೇಯರಿಗೆ ಟೆಂಡರ್ ನೀಡಲಾಗಿದೆ. ಒಂದು ಕಿ.ಮೀ.ಗೆ ಒಂದು ಕೋಟಿ ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲೂ ಲೂಟಿ ಮಾಡಲಾಗಿದೆ ಎಂದು ಆರೋಪ ಮಾಡಿದರು.

ಮೇಯರ್ ಯಾರು?

ಪ್ರಸ್ತುತ ಬಿಬಿಎಂಪಿಯಲ್ಲಿ ಮೇಯರ್ ಕರ್ತವ್ಯವನ್ನು ಉಪ ಮೇಯರ್ ಅವರೇ ನಿರ್ವಹಿಸುತ್ತಿರುವಂತಿದೆ. ಇಂದಿರಾ ಕ್ಯಾಂಟೀನ್‌ಗಳ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಉಪ ಮೇಯರ್ ಆದ ಮೋಹನ್‌ರಾಜ್ ಅವರು ಇಂದಿರಾ ಕ್ಯಾಂಟೀನ್‌ಗೆ ಕೆಂಪೇಗೌಡರ ಹೆಸರಿಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಬಿ ಖಾತೆಗಳ ಆಸ್ತಿಗಳನ್ನು ಎ ಖಾತೆಗೆ ಬದಲಾಯಿಸುವ ಭರವಸೆ ನೀಡುತ್ತಿದ್ದಾರೆ. ಮೇಯರ್ ಯಾರೆಂಬುದು ಗೊತ್ತಾಗುತ್ತಿಲ್ಲ. ಗೌತಮ್ಕುಮಾರ್ ಅವರೇ ಮೇಯರ್ ಯಾರು ಎಂದು ತಿಳಿಸಲಿ.

-ಅಬ್ದುಲ್ ವಾಜಿದ್, ಬಿಬಿಎಂಪಿ ಪ್ರತಿಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News