ಪತ್ರಕರ್ತರೊಬ್ಬರ ‘ಇದೊಂಥರಾ ಆತ್ಮಕತೆ’

Update: 2019-11-18 18:45 GMT

ಪತ್ರಕರ್ತನೊಬ್ಬ ತನ್ನ ಆತ್ಮಕತೆಯನ್ನು ಬರೆಯತೊಡಗಿದಂತೆ, ಅದು ಖಾಸಗಿಯಾಗಿ ಉಳಿಯದೆ ನಿಧಾನಕ್ಕೆ ಸಾರ್ವಜನಿಕವಾಗುತ್ತಾ ಹೋಗುತ್ತದೆ. ಅವನು ತನ್ನ ಕತೆಯನ್ನು ಹೇಳುವ ಬದಲು ಇತರರ ಕತೆಯನ್ನು ಹೇಳುವುದೇ ಅಧಿಕ. ಯಾಕೆಂದರೆ ಅವನೊಬ್ಬ ವೀಕ್ಷಕ. ಪತ್ರಿಕೆಗಳಲ್ಲಿ ವರದಿ ಬರೆಯುವ ಸಂದರ್ಭದಲ್ಲಿ ಕಂಡದ್ದೆಲ್ಲವನ್ನೂ ವಿವರಿಸಿ ಹೇಳುವುದಕ್ಕಾಗುವುದಿಲ್ಲ. ಪತ್ರಿಕೆಗಳ ಬರಹಗಳಿಗೆ ಅದರದೇ ಆದ ಮಿತಿಗಳಿವೆ. ಕೆಲವೊಮ್ಮೆ ಪತ್ರಕರ್ತನಿಗೆ ಬರೆಯಬೇಕಾದುದನ್ನು ಬರೆಯುವ ಸ್ವಾತಂತ್ರವೇ ಇರುವುದಿಲ್ಲ. ಪತ್ರಿಕೆಯ ಮಾತುಗಳನ್ನು ಆತ ಬರೆಯಬೇಕಾಗುತ್ತದೆ. ಆದುದರಿಂದ ಒಬ್ಬ ಪತ್ರಕರ್ತನಲ್ಲಿ ಬರೆದುದಕ್ಕಿಂತ ಬರೆಯದೇ ಒಳಗೆ ಹೆಪ್ಪುಗಟ್ಟಿರುವ ಘಟನೆಗಳೇ ಅಧಿಕ ಇರುತ್ತದೆ. ಆತ ಆತ್ಮಕತೆಯ ಹೆಸರಿನಲ್ಲಿ ಬರೆಯಲು ಹೊರಡುವುದೂ ಈ ಹೆಪ್ಪುಗಟ್ಟಿದ ಮಾತುಗಳನ್ನೇ. ಈ ಹಿನ್ನೆಲೆಯಲ್ಲಿ ಆರ್.ಟಿ. ವಿಠ್ಠಲ ಮೂರ್ತಿಯವರು ಬರೆದಿರುವ ‘ಇದೊಂಥರಾ ಆತ್ಮಕತೆ’ ಕುತೂಹಲ ಹುಟ್ಟಿಸುತ್ತದೆ. ಆರ್. ಟಿ. ವಿಠ್ಠಲ ಮೂರ್ತಿ ರಾಜಕೀಯ ಬರಹಗಾರರು. ಎಲ್ಲಕ್ಕಿಂತ ಮುಖ್ಯವಾಗಿ ದಿನ ಪತ್ರಿಕೆಗಳಿಂದ ಟ್ಯಾಬ್ಲಾಯಿಡ್ ಪತ್ರಿಕೆಗಳಿಗೆ ಬರೆಯುತ್ತಿದ್ದವರು. ದಿನ ಪತ್ರಿಕೆಗಳ ವರದಿಗಾರಿಕೆಗಿಂತ ಭಿನ್ನವಾದ ರಂಗ ಇದು. ಒಬ್ಬ ವರದಿಗಾರನನ್ನು ಸಾಹಸಕ್ಕೆ ಒಡ್ಡಲು, ಆತನನ್ನು ಬೆಳೆಸಲು, ಕೊಳೆಸಲು, ಇಳಿಸಲು ಈ ಟ್ಯಾಬ್ಲಾಯಿಡ್ ಪತ್ರಿಕೆಗಳಿಗೆ ಸಾಧ್ಯವಿದೆ. ಪತ್ರಕರ್ತನ ಪತನದ ಅಂತರ ಕೂದಲೆಳೆಯಷ್ಟು ಇರುತ್ತದೆ. ಇಲ್ಲಿ ಸುದೀರ್ಘ ಬದುಕನ್ನು ಕಳೆದೂ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದು ಒಂದು ಸಾಹಸವೇ ಸರಿ. ಅಂತಹ ಪತ್ರಕರ್ತರ ಸಾಲಿನಲ್ಲಿ ವಿಠ್ಠಲ ಮೂರ್ತಿ ಸೇರುತ್ತಾರೆ. ಅವರು ಪತ್ರಿಕೋದ್ಯಮದಲ್ಲಿ ಪಡೆದ ಅನುಭವ, ಕುತೂಹಲಕಾರಿ ಘಟನೆಗಳು, ಅವರು ಕಂಡ ರಾಜಕೀಯ ನಾಯಕರ ಬೇರೆಯದೇ ಮುಖಗಳನ್ನು ಇಲ್ಲಿ ನಾವು ಕಾಣಬಹುದಾಗಿದೆ.

ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಅವರು ಹೇಳುವಂತೆ ‘‘.....ಆರ್. ಟಿ. ಅವರ ಬರವಣಿಗೆಯಲ್ಲಿ ದೇವರಾಜ ಅರಸು, ದೇವೇಗೌಡ, ವೀರೇಂದ್ರ ಪಾಟೀಲ್, ಎಸ್. ಎಂ. ಕೃಷ್ಣ, ಧರ್ಮಸಿಂಗ್, ಕುಮಾರ ಸ್ವಾಮಿ ಮಾತ್ರ ಇದ್ದಾರೆಂದರೆ ತಪ್ಪು. ನಮಗೆ ಗೊತ್ತೇ ಆಗದಂತೆ, ಸಿದ್ದರಾಮಯ್ಯ ಅವರ ಮನೆಯಲ್ಲಿ ಅಡುಗೆ ಮಾಡುವಾತ, ಹಿಮಾಚಲ ತಪ್ಪಲಲ್ಲಿ ಟೀ ಮಾಡುವವ, ಕಡಿದಾಳ ಮಂಜಪ್ಪನವರ ಮುಂದೆ ನಿಂತ ಸೊಂಟ ಬಾಗಿದ ಮುದುಕಿ, ಬಂಗಾರಪ್ಪನವರು ಕಂಡ ಮಳೆಯ ಹೊಡೆತಕ್ಕೆ ಸಿಕ್ಕಿದ ಹಣ್ಣು ಹಣ್ಣು ಮುದುಕಿ, ಜೋಳದ ರೊಟ್ಟಿ, ಝನಕಾ ಮಾಡಿಕೊಟ್ಟ ವೀರೇಂದ್ರ ಪಾಟೀಲರ ಪತ್ನಿ, ಸಾಗರ ಬೆಣ್ಣೆ ದೋಸೆ ಕೃಷ್ಣಪ್ಪ, ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ, ಕೊಡೆ ಕದ್ದು ಕೊಡುತ್ತಿದ್ದ ಪಾಂಡು, ರಪ್ಪನೆ ಮುಖಕ್ಕೆ ಬಿಗಿದ ಗಂಗಮ್ಮಜ್ಜಿ, ಫ್ರೆಂಡ್ ಆ್ಯಂಡ್ ಗೈಡ್ ಮೋಹನಣ್ಣ....ಹೀಗೆ ಜನಸಾಮಾನ್ಯರ ಗಡಣವೇ ಇದೆ. ಮುಖ್ಯಮಂತ್ರಿಗಳ ಕಥೆಗಳು ಮಾತ್ರ ಕುತೂಹಲಕರ ಎಂದು ಕೊಂಡವರಿಗೆ ಥಟ್ಟನೆ ಆರ್. ಟಿ. ಇವರೆಲ್ಲರ ಲೋಕವನ್ನು ಬಿಚ್ಚಿ ಕೊಡುತ್ತಾರೆ....’’

ಬಹುರೂಪಿ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 200 ಪುಟಗಳ ಈ ಕೃತಿಯ ಮುಖಬೆಲೆ 250 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News