ಟಿಕ್ ಟಿಕ್ ಕಾಲ ಸನ್ನಿಹಿತ..!

Update: 2019-11-19 04:05 GMT

ನಮ್ಮ ಎಳೆಯದರಲ್ಲಿ ಮಂಗಳೂರ ಕ್ಲಾಕ್ ಟವರ್ ಬಲು ಫೇಮಸ್. ಹಂಪನಕಟ್ಟೆಗೆ ಸೊಬಗು ನೀಡಿದ್ದ ವಿಶ್ವವಿದ್ಯಾಲಯ ಕಟ್ಟಡದ ಸಮೀಪದ 45 ಅಡಿಯ ಬಿಳಿ ಬಣ್ಣದ ಕ್ಲಾಕ್ ಟವರ್ ಅಭಿವೃದ್ಧಿಯ ನೆಪದಲ್ಲಿ ಧರೆಗುರುಳಿದಾಗ ಏನೋ ಮಿಸ್ ಮಾಡ್ಕೊಂಡ ಅನುಭವ. ಆದರೆ ಅದು ಅದೇ ಸ್ಥಳದಲ್ಲಿ ಪುನರ್ಜೀವ ಪಡೆಯಲು ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿಗೆ ಬರಬೇಕಾಯಿತು. ಮಹಾನಗರ ಪಾಲಿಕೆ ಸುಮಾರು ಒಂದು ಕೋಟಿಯ ಅನುದಾನದಲ್ಲಿ ಹೊಸ ಕ್ಲಾಕ್ ಟವರ್ ನ್ನು ಫೈನಲ್ ಸ್ಟೇಜಿಗೆ ತಂದು ನಿಲ್ಲಿಸಿದೆ.

ನಾಯಕ್ ಕ್ಲಾಕ್ಸ್ ಸಂಸ್ಥೆಯ ಜನಕ ವಾಮನ್ ನಾಯಕ್ ಅವರು 1964ರಲ್ಲಿ ಹಂಪನಕಟ್ಟೆಯ ಹಳೆಯ ಕ್ಲಾಕ್ ಟವರ್ ನಿರ್ಮಾತೃ ಆಗಿದ್ದರು. ಅದಕ್ಕೆ ವಾರಕ್ಕೊಮ್ಮೆ ಕೀ ಕೊಡಬೇಕಾಗುತ್ತಿತ್ತು. ನಗರಾಭಿವೃದ್ಧಿ ನೆಪದಲ್ಲಿ ಆ ಸುಂದರ ಟವರ್ ಇತಿಹಾಸದ ಪುಟ ಸೇರಿತ್ತು. ಆದರೆ ಈಗ ಮತ್ತೆ ಮೈದೆಳೆದಿದೆ ಅನ್ನೋದೇ ಸಂತೋಷ.

ಮಂಗಳೂರು ಮಾರ್ನಮಿಕಟ್ಟೆಯ ನಾಯಕ್ಸ್ ಟೈಮ್ ಸಂಸ್ಥೆಯ ಸತೀಶ್ ನಾಯಕ್ ಹಾಗೂ ಸಿದ್ದಾಂತ್ ನಾಯಕ್ ಹೊಸ ಕ್ಲಾಕ್ ಟವರ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದಕ್ಕಾಗಿ 75 ಅಡಿಯ ಸಾಂಪ್ರದಾಯಿಕ ಶೈಲಿಯ ಟವರ್ ತಲೆ ಎತ್ತಿದೆ. ಈ ಟವರ್ ನ ನಾಲ್ಕೂ ದಿಕ್ಕಿಗೆ ದೊಡ್ಡದಾದ ಗಡಿಯಾರ ಅಳವಡಿಸಲಾಗಿದೆ. ಗಡಿಯಾರದ ಯಂತ್ರೋಪಕರಣವನ್ನು ಇಟಲಿಯಿಂದ ತರಿಸಲಾಗಿದೆ. ಪ್ರತಿ ಅರ್ಧ ತಾಸಿಗೊಮ್ಮೆ ಬೆಲ್ ಮೊಳಗಿಸಲು ಎರಡು ಸೌಂಡ್ ಬಾಕ್ಸ್ ಫಿಕ್ಸ್ ಮಾಡಲಾಗಿದೆ. ಈ ಗಡಿಯಾರಕ್ಕೆ ಹಿಂದಿನಂತೆ ಕೀ ಕೊಡಬೇಕಾಗಿಲ್ಲ. ಸಿಡಿಲಿಗೂ ಬಗ್ಗಲ್ಲ. ಹೊಸ ತಂತ್ರಜ್ಞಾನದ ಮಂಗಳೂರ ಹೊಸ ಕ್ಲಾಕ್ ಟವರ್ ರಾಜ್ಯದಲ್ಲೇ ಅತಿದೊಡ್ಡ ಗಡಿಯಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಂದರು, ಮಾರ್ಕೆಟ್, ಪಾಂಡೇಶ್ವರ, ಹಂಪನಕಟ್ಟೆ ಹೀಗೇ ನಾಲ್ಕೂ ಮಾರ್ಗಗಳನ್ನು ಸಂಧಿಸುವ ಸರ್ಕಲ್ ಆಗಿ ಈ ಟವರ್ ನಿರ್ಮಾಣವಾಗಿದೆ. ಹಿಂದೆ ಇದ್ದ ಅದೇ ಸ್ಥಳವನ್ನೇ ಆಯ್ಕೆ ಮಾಡಲಾಗಿದೆ. ವಿಶ್ವವಿದ್ಯಾಲಯ ಕಟ್ಟಡ, ವೆನ್ಲಾಕ್ ಜಿಲ್ಲಾಸ್ಪತ್ರೆ, ಲೇಡಿಗೋಶನ್, ಪುರಭವನ, ಮಿನಿ ವಿಧಾನಸೌಧ ಹೀಗೇ ಪ್ರಮುಖ ಕಟ್ಟಡಗಳು ಇದರ ಸನಿಹದಲ್ಲಿವೆ. ಹೊಸ ಕ್ಲಾಕ್ ಟವರ್ ಮತ್ತೆ ಅಭಿವೃದ್ಧಿಯ ನೆಪಕ್ಕೆ ಬಲಿಯಾಗದೇ ದೀರ್ಘಕಾಲ ಬಾಳಲೆಂಬ ಹಾರೈಕೆ.

Writer - -ರಶೀದ್ ವಿಟ್ಲ

contributor

Editor - -ರಶೀದ್ ವಿಟ್ಲ

contributor

Similar News