ಈ ಒಂದು ಜಿಲ್ಲೆಯ 10,000 ಜನರ ಮೇಲೆ ದೇಶದ್ರೋಹದ ಆರೋಪ !

Update: 2019-11-19 14:47 GMT
ಫೋಟೊ: scroll.in

ಹೊಸದಿಲ್ಲಿ, ನ.19: ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳ ಚುನಾವಣೆಗೆ ನ.30ರಿಂದ ಮತದಾನ ಆರಂಭಗೊಳ್ಳಲಿದೆ. ಇದೇ ವೇಳೆ ರಾಜ್ಯದ ರಾಜಧಾನಿ ರಾಂಚಿಯಿಂದ ಒಂದು ಗಂಟೆ ಪ್ರಯಾಣದ ದೂರದಲ್ಲಿರುವ ಖುಂಟಿ ಜಿಲ್ಲೆಯಲ್ಲಿನ ಆದಿವಾಸಿ ಜಿಲ್ಲೆಗಳಲ್ಲಿ ತಮ್ಮ ‘ಪತ್ಥಲಗಡಿ ’ಪ್ರತಿಭಟನಾ ಆಂದೋಲನದ ಅಂಗವಾಗಿ ಚುನಾವಣೆಯನ್ನು ಬಹಿಷ್ಕರಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಪತ್ಥಲಗಡಿ ಎಂದರೆ ಇಲ್ಲಿನ ಆದಿವಾಸಿಗಳ ಭಾಷೆಯಲ್ಲಿ ಕಲ್ಲುಗಳನ್ನಿಡುವದು ಎಂದು ಅರ್ಥ. 2017ರಲ್ಲಿ ಖುಂಟಿಯ ಗ್ರಾಮಗಳಲ್ಲಿ ಭಾರತೀಯ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಹಕ್ಕುಗಳನ್ನು ಕೆತ್ತಿದ ಏಕಶಿಲಾ ಶಾಸನಗಳನ್ನು ಸ್ಥಾಪಿಸುವುದರೊಂದಿಗೆ ಪತ್ಥಲಗಡಿ ಆಂದೋಲನವು ಆರಂಭಗೊಂಡಿತ್ತು. ಈ ಕೆತ್ತನೆಗಳು ಭಾರತೀಯ ಸಂವಿಧಾನದ ಐದನೇ ಅನುಸೂಚಿಯಡಿ ಆದಿವಾಸಿ ಪ್ರದೇಶಗಳಿಗೆ ಒದಗಿಸಲಾಗಿರುವ ವಿಶೇಷ ಸ್ವಾಯತ್ತತೆಯನ್ನು ಪ್ರಮುಖವಾಗಿ ಬಿಂಬಿಸುತ್ತಿವೆ.

ಆದಿವಾಸಿಗಳ ಶಾಂತಿಯುತ ಆಂದೋಲನವನ್ನು ಬಗ್ಗುಬಡಿಯಲು ದೌರ್ಜನ್ಯ ಮೆರೆದ ಜಾರ್ಖಂಡ್ ಪೊಲೀಸರು ಸಾವಿರಾರು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

2017 ಜೂನ್-2018 ಜುಲೈ ನಡುವೆ ಖುಂಟಿ ಜಿಲ್ಲೆಯಲ್ಲಿ ಪೊಲೀಸರು ದಾಖಲಿಸಿಕೊಂಡಿರುವ 19 ಎಫ್‌ಐಆರ್ ‌ಗಳು ಈ ಜಿಲ್ಲೆಗೆ ಇತ್ತೀಚಿಗೆ ಭೇಟಿ ನೀಡಿದ್ದ ಸುದ್ದಿ ಜಾಲತಾಣ ‘ಸ್ಕ್ರೋಲ್ ಡಾಟ್ ಇನ್ ’ನ ತನಿಖಾ ತಂಡಕ್ಕೆ ಲಭ್ಯವಾಗಿವೆ. ಇವುಗಳಲ್ಲಿ 11,200ಕ್ಕೂ ಅಧಿಕ ಜನರ ವಿರುದ್ಧ ಸಾರ್ವಜನಿಕ ಸುವ್ಯವಸ್ಥೆ ಭಂಗಕ್ಕೆ ಸಂಬಂಧಿಸಿದ ಹಲವಾರು ಆರೋಪಗಳನ್ನು ಹೊರಿಸಲಾಗಿದೆ.

 ಐಪಿಸಿಯ ಕಲಂ 124 ಎ ಅಡಿ ದೇಶದ್ರೋಹವು 10,000ಕ್ಕೂ ಅಧಿಕ ಜನರನ್ನೊಳಗೊಂಡಿರುವ 14 ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿರುವ ಆರೋಪಗಳಲ್ಲೊಂದಾಗಿದೆ. ಬ್ರಿಟಿಷರ ಕಾಲದ ಪಳೆಯುಳಿಕೆಯಾಗಿರುವ ಈ ಕಲಮ್‌ನಡಿ ‘ ಸರಕಾರದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ ಯಾರನ್ನೇ ಆದರೂ ಜೀವಾವಧಿ ಶಿಕ್ಷೆ ಸೇರಿದಂತೆ ದಂಡನೆಗೊಳಪಡಿಸಬಹುದಾಗಿದೆ.

ದೇಶದ್ರೋಹದ ಆರೋಪ ಹೊರಿಸಲ್ಪಟ್ಟಿರುವ 10,000 ಆದಿವಾಸಿಗಳು ಖುಂಟಿಯ ಜನಸಂಖ್ಯೆಯ ಶೇ.2ರಷ್ಟಿದ್ದಾರೆ. ಪತ್ಥಲಗಡಿ ಬೆಂಬಲಿಗರ ವಿರುದ್ಧ ಈ 19 ಎಫ್‌ಐಆರ್‌ಗಿಂತಲೂ ಹೆಚ್ಚಿನ ಎಫ್‌ಐಆರ್‌ಗಳು ದಾಖಲಾಗಿವೆ ಎನ್ನಲಾಗಿದ್ದು,ಜಿಲ್ಲೆಯಲ್ಲಿ ದೇಶದ್ರೋಹದ ಆರೋಪಕ್ಕೆ ಗುರಿಯಾಗಿರುವವರ ಸಂಖ್ಯೆ ವಾಸ್ತವದಲ್ಲಿ ಇದಕ್ಕಿಂತಲೂ ಹೆಚ್ಚಾಗಿರಬಹುದು.

ಈ 19 ಎಫ್‌ಐಆರ್‌ಗಳಲ್ಲಿ ಪೊಲೀಸರು 132 ಜನರನ್ನು ಹೆಸರುಗಳಿಂದ ಗುರುತಿಸಿದ್ದಾರೆ,ಇವರಲ್ಲಿ ಹೆಚ್ಚಿನವರ ಹೆಸರುಗಳು ಒಂದಕ್ಕಿಂತಲೂ ಹೆಚ್ಚಿನ ಎಫ್‌ಐಆರ್‌ಗಳಲ್ಲಿವೆ. ಆರೋಪಿಗಳ ಪೈಕಿ 43 ಜನರು ಆದಿವಾಸಿ ಗ್ರಾಮಗಳ ಮುಖ್ಯಸ್ಥರಾಗಿದ್ದಾರೆ. ಇತರರನ್ನು ‘ಅಪರಿಚಿತ ವ್ಯಕ್ತಿಗಳು ’ಎಂದು ಉಲ್ಲೇಖಿಸಲಾಗಿರುವುದು ಈ ಗ್ರಾಮಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಭವಿಷ್ಯದಲ್ಲಿ ಪೊಲೀಸರು ಯದ್ವಾತದ್ವಾ ಯಾರನ್ನಾದರೂ ಪ್ರಕರಣಗಳಲ್ಲಿ ಸಿಲುಕಿಸಬಹುದು ಎನ್ನುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

 ಅಂದ ಹಾಗೆ ಜಾರ್ಖಂಡ್‌ನ ಅತ್ಯಂತ ಜನಪ್ರಿಯ ಐತಿಹಾಸಿಕ ವ್ಯಕ್ತಿಗಳ ಪೈಕಿ ಇಬ್ಬರು ಖುಂಟಿ ಜಿಲ್ಲೆಯವರೇ ಆಗಿದ್ದರು. ಬ್ರಿಟಿಷರ ವಿರುದ್ಧ ಪ್ರಬಲ ಬಂಡಾಯದ ನೇತೃತ್ವ ವಹಿಸಿದ್ದ ಬಿರ್ಸಾ ಮುಂಡಾ ಇಂತಹ ಮೊದಲ ವ್ಯಕ್ತಿ. 1900ರಲ್ಲಿ 25ರ ಎಳೆಯ ವಯಸ್ಸಿನಲ್ಲಿಯೇ ಮುಂಡಾರನ್ನು ಬ್ರಿಟಿಷರು ಕೊಂದಿದ್ದರು. 1928ರ ಒಲಿಂಪಿಕ್ಸ್‌ನಲ್ಲಿ ತನ್ನ ನೇತೃತ್ವದಲ್ಲಿ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ದೊರಕಿಸಿಕೊಟ್ಟಿದ್ದ ಖ್ಯಾತ ಹಾಕಿ ಆಟಗಾರ ಜೈಪಾಲ ಸಿಂಗ್ ಮುಂಡಾ ಇನ್ನೋರ್ವ ವ್ಯಕ್ತಿ. ಅವರು 1950ರಲ್ಲಿ ಭಾರತೀಯ ಸಂವಿಧಾನವನ್ನು ದೃಢೀಕರಿಸಿದ್ದ ಸಂವಿಧಾನ ಸಭೆಯಲ್ಲಿ ಆದಿವಾಸಿಗಳ ಪರವಾಗಿ ಬಲವಾಗಿ ಧ್ವನಿ ಎತ್ತಿದ್ದರು.

ಇದಾಗಿ ಏಳು ದಶಕಗಳ ಬಳಿಕ,ತಮ್ಮ ಭೂ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂವಿಧಾನದ ಮೊರೆ ಹೋಗಿರುವುದಕ್ಕಾಗಿ ತಮ್ಮನ್ನು ಬೇಟೆಯಾಡಲಾಗುತ್ತಿದೆ ಎಂದು ಆದಿವಾಸಿಗಳು ಹೇಳುತ್ತಿದ್ದಾರೆ.

ದುರಂತವೆಂದರೆ ಎಫ್‌ಐಆರ್ ‌ಗಳಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಲ್ಪಟ್ಟಿರುವ ಹೆಚ್ಚಿನವರು ಅಲ್ಲಿಯವರೆಗೆ ಆ ಶಬ್ಧವನ್ನೇ ಕೇಳಿದವರಲ್ಲ. ಇಷ್ಟಕ್ಕೂ ತಾವು ದೇಶದ್ರೋಹದ ಯಾವ ಕೆಲಸವನ್ನು ಮಾಡಿದ್ದೇವೆ ಎನ್ನುವುದೂ ಅವರಿಗೆ ಗೊತ್ತಾಗುತ್ತಿಲ್ಲ.

ಬಿರ್ಸಾ ಮುಂಡಾ ಅವರು ಹುಟ್ಟು ಹಾಕಿದ್ದ ಬಂಡಾಯವು ಅವರ ಸಾವಿನ ಎಂಟು ವರ್ಷಗಳ ಬಳಿಕ 1908ರಲ್ಲಿ ಬ್ರಿಟಿಷ್ ಸರಕಾರವು ಆದಿವಾಸಿಗಳ ಭೂ ಹಕ್ಕುಗಳ ರಕ್ಷಣೆಗೆ ಛೋಟಾನಾಗ್ಪುರ ಹಿಡುವಳಿ ಕಾಯ್ದೆ ಅಂಗೀಕರಿಸುವುದನ್ನು ಅನಿವಾರ್ಯವಾಗಿಸಿತ್ತು. 2016ರಲ್ಲಿ ಬಿಜೆಪಿ ಸರಕಾರವು ಈ ಕಾಯ್ದೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದು ಪತ್ಥಲಗಡಿ ಆಂದೋಲನಕ್ಕೆ ನಾಂದಿ ಹಾಡಿತ್ತು.

ಬಿಜೆಪಿ ಸರಕಾರದ ಕುಟಿಲತನವನ್ನು ವಿರೋಧಿಸಿ ಪ್ರತಿಭಟನೆಗಿಳಿದಿದ್ದ ಆದಿವಾಸಿಗಳು ಪೊಲೀಸರ ದೌರ್ಜನ್ಯಗಳಿಗೂ ಗುರಿಯಾಗಿದ್ದಾರೆ. ಪೊಲೀಸರ ಗುಂಡುಗಳಿಗೆ ಹಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಶೋಧ ಕಾರ್ಯಾಚರಣೆಗಳ ನೆಪದಲ್ಲಿ ಹಲವಾರು ಮನೆಮಾರುಗಳನ್ನು ನೆಲಸಮಗೊಳಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ರ್ಯಾಲಿಗಳನ್ನು ನಡೆಸಲೂ ತಮಗೆ ಹಕ್ಕುಗಳು ನಿರಾಕರಿಸಲ್ಪಟ್ಟ ಬಳಿಕ ಗ್ರಾಮಗಳಲ್ಲಿಯೇ ಉಳಿಯಲು ನಿರ್ಧರಿಸಿದ ಗ್ರಾಮಸ್ಥರು ಸಂವಿಧಾನದ ಐದನೇ ಅನುಸೂಚಿಯಡಿ ತಮ್ಮ ಹಕ್ಕುಗಳನ್ನು ಘೋಷಿಸಲು ನಿರ್ಧರಿಸಿದ್ದರು. ಇಂತಹ ಹಕ್ಕುಗಳನ್ನು ಕೆತ್ತಿದ್ದ ಮೊದಲ ಶಿಲಾಫಲಕವನ್ನು ಭಂಡ್ರಾ ಗ್ರಾಮದಲ್ಲಿ 2017,ಮಾ.3ರಂದು ಸ್ಥಾಪಿಸಲಾಗಿತ್ತು. ಅಲ್ಲಿಂದೀಚಿಗೆ ಹಲವಾರು ಆದಿವಾಸಿ ಗ್ರಾಮಗಳಲ್ಲಿ ಇಂತಹ ಶಿಲಾಫಲಕಗಳು ತಲೆಯೆತ್ತಿವೆ.

ದೊಡ್ಡ ಕಂಪನಿಗಳಿಗೆ ನೀಡಲು ತಮ್ಮಿಂದ ಭೂಮಿಯನ್ನು ಕಿತ್ತುಕೊಳ್ಳಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹೆಚ್ಚಿನ ಆದಿವಾಸಿಗಳಿಗೆ ಸಂವಿಧಾನದಡಿ ತಮ್ಮ ಹಕ್ಕುಗಳ ಬಗ್ಗೆ ಗೊತ್ತೇ ಇರಲಿಲ್ಲ. 2012ರಿಂದ ನಗರ ಆದವಾಸಿ ಬುದ್ಧಿಜೀವಿಗಳು ಖುಂಟಿ ಜಿಲ್ಲಾ ಕೇಂದ್ರದಲ್ಲಿ ನಡೆಸಲಾರಂಭಿಸಿದ್ದ ಸಭೆಗಳಲ್ಲಿ ಭಾಗವಹಿಸಿ ಬಳಿಕವಷ್ಟೇ ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಾಗಿತ್ತು. ಈ ನಗರದ ಬುದ್ಧಿಜೀವಿಗಳನ್ನು ಪತ್ಥಲಗಡಿ ಆಂದೋಲನದ ರೂವಾರಿಗಳು ಎಂದು ಪೊಲೀಸರು ಎಫ್‌ಐಆರ್‌ಗಳಲ್ಲಿ ಹೆಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News