ಆಸ್ಟ್ರೇಲಿಯದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚು: ಬಿಗಡಾಯಿಸಿದ ಸಿಡ್ನಿಯ ಮಾಲಿನ್ಯ ಮಟ್ಟ

Update: 2019-11-19 16:15 GMT
Image: AAP

ಸಿಡ್ನಿ, ನ. 19: ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚಿನಿಂದಾಗಿ ದೇಶದ ಅತಿ ದೊಡ್ಡ ನಗರ ಸಿಡ್ನಿಯ ಮಾಲಿನ್ಯ ಮಟ್ಟ ಏರುತ್ತಿದೆ ಹಾಗೂ ನಗರವು ಮಂಗಳವಾರ ಅಪಾಯಕಾರಿ ಮಟ್ಟದಲ್ಲಿ ಮಬ್ಬುವಿನಿಂದ ಆವರಿಸಲ್ಪಟ್ಟಿದೆ.

ಮಾಲಿನ್ಯ ಮಟ್ಟವು ಸಿಡ್ನಿಯಾದ್ಯಂತ ‘ಅಪಾಯಕಾರಿ’ ಮಟ್ಟವನ್ನು ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತವೆ. ನಗರದ ವಾಯುವ್ಯ ಭಾಗದಲ್ಲಿ ಪಿಎಂ 2.5 ಕಣಗಳು 186ನ್ನು ತಲುಪಿದೆ. ಇದು ದಿಲ್ಲಿಗಿಂತಲೂ ಕಳಪೆಯಾಗಿದೆ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಸಾಮಾನ್ಯವಾಗಿ ನೀಲಿ ಬಣ್ಣದಿಂದ ಕೂಡಿರುವ ಬಂದರು ನಗರದ ಆಕಾಶವು ಬೂದು ಬಣ್ಣಕ್ಕೆ ತಿರುಗಿದೆ. ವಿಶ್ವವಿಖ್ಯಾತ ನಿರ್ಮಾಣಗಳಾದ ಸಿಡ್ನಿ ಒಪೇರಾ ಹೌಸ್ ಮತ್ತು ಹಾರ್ಬರ್ ಬ್ರಿಜ್ ಆಕಾಶದ ಹಿನ್ನೆಲೆಯಲ್ಲಿ ಮಂದವಾಗಿ ಕಾಣುತ್ತಿದೆ.

ಹೊಗೆಯಲ್ಲಿರುವ ಅತಿ ಸಣ್ಣ ಕಣಗಳು ಶ್ವಾಸ ವ್ಯವಸ್ಥೆಗೆ ಹಾನಿಯುಂಟು ಮಾಡಬಹುದು ಹಾಗೂ ಹಾಲಿ ಶ್ವಾಸಕೋಶ ಮತ್ತು ಹೃದಯದ ಸ್ಥಿತಿಗತಿಗಳನ್ನು ಬಿಗಡಾಯಿಸಬಹುದು ಎಂದು ನ್ಯೂ ಸೌತ್ ವೇಲ್ಸ್ ರಾಜ್ಯದ ಪರಿಸರ ಆರೋಗ್ಯ ನಿರ್ದೇಶಕ ರಿಚರ್ಡ್ ಬ್ರೂಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News