ಇಸ್ರೇಲಿ ಸ್ಪೈವೇರ್ ಬಳಸಿ ಸರಕಾರ ಬೇಹುಗಾರಿಕೆ ನಡೆಸಿದೆಯೇ ?: ಪ್ರಶ್ನೆಗೆ ಸೂಕ್ತ ಉತ್ತರ ನೀಡದ ಗೃಹ ಸಚಿವಾಲಯ

Update: 2019-11-19 17:09 GMT
ಫೋಟೊ ಕೃಪೆ: Reuters

ಹೊಸದಿಲ್ಲಿ, ನ. 19: ವ್ಯಾಟ್ಸ್ ಆ್ಯಪ್ ಮೂಲಕ ಭಾರತೀಯ ನಾಗರಿಕರ ಬಗ್ಗೆ ಬೇಹುಗಾರಿಗೆ ನಡೆಸಲು ಇಸ್ರೇಲಿ ಸ್ಪೈವೇರ್ ನಿಯೋಜನೆಯಲ್ಲಿ ಕೇಂದ್ರ ಸರಕಾರ ಭಾಗಿಯಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಪ್ರಶ್ನಿಸಿದಾಗ ಕೇಂದ್ರ ಗೃಹ ಸಚಿವಾಲಯ, ಆಂತರಿಕ ಭದ್ರತೆಯ ಆಧಾರದಲ್ಲಿ ಯಾವುದೇ ಕಂಪ್ಯೂಟರ್‌ಗಳಲ್ಲಿ ಸಂಗ್ರಹವಾಗಿರುವ ಯಾವುದೇ ಮಾಹಿತಿಯ ಬಗ್ಗೆ ಬೇಹುಗಾರಿಕೆ ನಡೆಸಲು ಹಾಗೂ ಗೂಢಲಿಪಿ ಬೇಧಿಸಲು ಭದ್ರತಾ ಸಂಸ್ಥೆಗಳಿಗೆ ಅವಕಾಶ ನೀಡುವ ಕಾನೂನನ್ನು ಮಂಗಳವಾರ ಉಲ್ಲೇಖಿಸಿತು.

ಕಳೆದ ತಿಂಗಳು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ವ್ಯಾಟ್ಸ್ ಆ್ಯಪ್ ಸ್ಪೈಗೇಟ್ ವಿಷಯದ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ವಿಸ್ತೃತ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಜಿ. ಕೃಷ್ಣ ರೆಡ್ಡಿ, ತಾಂತ್ರಿಕ ಮಾಹಿತಿ ಕಾಯ್ದೆ-2000ರ 69ನೆ ಕಲಂ ಅಡಿಯಲ್ಲಿ ಬೇಹುಗಾರಿಕೆ ನಡೆಸಲು ಕೇಂದ್ರ ಸರಕಾರಕ್ಕೆ ಅಧಿಕಾರ ಇದೆ ಎಂದು ಸಿದ್ಧ ಉತ್ತರ ನೀಡಿದರು.

 ಯಾವುದೇ ಕಂಪ್ಯೂಟರ್ ‌ಗಳಲ್ಲಿ ದಾಸ್ತಾನ ಇರಿಸಲಾದ, ಸ್ವೀಕರಿಸಲಾದ ವರ್ಗಾಯಿಸಲಾದ ಹಾಗೂ ಉತ್ಪಾದಿಸಲಾದ ಯಾವುದೇ ಮಾಹಿತಿಯ ಮಧ್ಯೆಪ್ರವೇಶಿಸಲು, ಬೇಹುಗಾರಿಕೆ ನಡೆಸಲು ಅಥವಾ ನಿಗೂಢ ಲಿಪಿ ಭೇದಿಸಲು ತನಿಖಾ ಸಂಸ್ಥೆಗಳಿಗೆ ಅಧಿಕಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಸಬಲೀಕರಿಸಬೇಕು ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ಟೆಲಿಗ್ರಾಫ್ ಕಾಯ್ದೆ 1885ರ ಕಲಂ 5ರಲ್ಲಿ ಸಾರ್ವಜನಿಕ ಸುರಕ್ಷೆಯ ಹಿತಾಸಕ್ತಿ ಅಥವಾ ಸಾರ್ವಜನಿಕ ತುರ್ತಿನ ಸಂದರ್ಭ ನಿರ್ದಿಷ್ಟ ವ್ಯಕ್ತಿಗಳ ಸಂದೇಶಗಳನ್ನು ನೋಡಲು ತನಿಖಾ ಸಂಸ್ಥೆಗೆ ಅಧಿಕಾರ ನೀಡುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಪ್ರಕರಣದಲ್ಲಿ ಕೇಂದ್ರ ಗೃಹ ಕಾಯರ್ದರ್ಶಿ ಹಾಗೂ ರಾಜ್ಯಗಳ ಪ್ರಕರಣದಲ್ಲಿ ಸಂಬಂಧಿತ ರಾಜ್ಯ ಗೃಹ ಕಾರ್ಯದರ್ಶಿಗಳಿಗೆ ಬೇಹುಗಾರಿಕೆ ನಡೆಸುವ ಅಧಿಕಾರ ಇರುತ್ತದೆ ಎಂದು ಅವರು ತಿಳಿಸಿದರು.

 ಆದರೆ, ಸರಕಾರ ಮಾನವ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು ಹಾಗೂ ಇತರರ ವ್ಯಾಟ್ಸ್‌ಆ್ಯಪ್ ಅನ್ನು ಹ್ಯಾಕ್ ಮಾಡಲು ಬಳಸುವ ಇಸ್ರೇಲಿ ಬೇಹುಗಾರಿಕೆ ಸಾಫ್ಟ್‌ವೇರ್ ಪೆಗಾಸಸ್ ಅನ್ನು ಖರೀದಿಸಿದೆಯೇ? ಅಥವಾ ವ್ಯಾಟ್ಸ್ ಆ್ಯಪ್ ಸಂದೇಶ ಹಾಗೂ ಕರೆಯ ಮೇಲೆ ಕಣ್ಗಾವಲು ಇರಿಸಲು ಯಾವುದಾದರೂ ನಿರ್ದಿಷ್ಟ ನಿಯಮಾವಳಿಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಉತ್ತರ ನೀಡಿಲ್ಲ.

 ಇಸ್ರೇಲಿ ಕಂಪೆನಿ ಎನ್‌ಎಸ್‌ಒ ಗುಂಪಿನ ಸ್ಪೈವೇರ್ ಪೆಗಾಸಸ್ ಭಾರತೀಯ ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ವ್ಯಾಟ್ಸ್ ಆ್ಯಪ್ ಹೇಳಿದ ಬಳಿಕ ಕಳೆದ ತಿಂಗಳು ಹಲವು ವಕೀಲರು ಹೋರಾಟಗಾರರು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಿರುವುದನ್ನು ದೃಢಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News