ವಿದ್ಯಾರ್ಥಿನಿ ಫಾತಿಮಾ ಲತೀಫ್ ಆತ್ಮಹತ್ಯೆ ಪ್ರಕರಣ: ಮೂವರು ಪ್ರೊಫೆಸರ್‌ಗಳ ವಿಚಾರಣೆ

Update: 2019-11-19 17:46 GMT

ಚೆನ್ನೈ, ನ.19: ಮದ್ರಾಸ್ ಐಐಟಿಯ ವಿದ್ಯಾರ್ಥಿನಿ ಫಾತಿಮಾ ಲತೀಫ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆತ್ಮಹತ್ಯೆ ಪತ್ರ(ಸೂಸೈಡ್ ನೋಟ್)ದಲ್ಲಿ ವಿದ್ಯಾರ್ಥಿನಿ ಹೆಸರಿಸಿದ್ದ ಮೂವರು ಪ್ರೊಫೆಸರ್‌ಗಳನ್ನು ಸೋಮವಾರ ವಿಶೇಷ ತನಿಖಾ ದಳ ವಿಚಾರಣೆ ನಡೆಸಿದೆ.

ನವೆಂಬರ್ 9ರಂದು ಫಾತಿಮಾರ ಮೃತದೇಹ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಹಾಸ್ಟೆಲ್ ಕೋಣೆಯಲ್ಲಿ ಪತ್ತೆಯಾಗಿತ್ತು. ಜೊತೆಗೆ ಇರಿಸಲಾಗಿದ್ದ ಸೂಸೈಡ್ ನೋಟ್‌ನಲ್ಲಿ ಮೂವರು ಪ್ರೊಫೆಸರ್‌ಗಳ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಫಾತಿಮಾರ ಹೆತ್ತವರು ಹೇಳಿದ್ದರು.

ಶನಿವಾರ ಫಾತಿಮಾರ ತಂದೆಯನ್ನು ಭೇಟಿಮಾಡಿದ್ದ ವಿಶೇಷ ತನಿಖಾ ದಳ ಅವರನ್ನು ಪ್ರಶ್ನಿಸಿತ್ತು. ಅಲ್ಲದೆ ಫಾತಿಮಾ ವಾಸವಿದ್ದ ಹಾಸ್ಟೆಲ್‌ನ ಹಲವರನ್ನು ಹಾಗೂ ಸಿಬ್ಬಂದಿ ವರ್ಗದವರನ್ನೂ ಪ್ರಶ್ನಿಸಲಾಗಿದೆ. ಈ ಮಧ್ಯೆ, ಫಾತಿಮಾ ಸಾವಿನ ಪ್ರಕರಣದಲ್ಲಿ ಬೋಧನಾ ವರ್ಗದವರ ಪಾತ್ರವಿದೆ ಎಂಬ ಆರೋಪದ ಬಗ್ಗೆ ಆಂತರಿಕ ತನಿಖೆಗೆ ಒತ್ತಾಯಿಸಿ ಐಐಟಿ ಮದ್ರಾಸ್‌ನ ಇಬ್ಬರು ವಿದ್ಯಾರ್ಥಿಗಳಾದ ಅಝರ್ ಮೊಯ್ದೀನ್ ಮತ್ತು ಜಸ್ಟಿನ್ ಜೋಸೆಫ್ ಸೋಮವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ ಕೊನೆಗೊಂಡಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಡಳಿತ ವರ್ಗ ಒಪ್ಪಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಐಐಟಿಯ ಎಲ್ಲಾ ವಿಭಾಗಗಳಲ್ಲೂ ಅತೀ ಶೀಘ್ರವಾಗಿ ದೂರು ಮತ್ತು ಪರಿಹಾರ ವ್ಯವಸ್ಥೆ ರೂಪಿಸಲಾಗುವುದು ಎಂದು ಡೀನ್ ಅವರಿಂದ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡಲಾಗಿದೆ . ಪ್ರಕರಣದಲ್ಲಿ ಬೋಧಕ ವರ್ಗದವರ ಪಾತ್ರದ ಕುರಿತು ತನಿಖೆಯ ಬಗ್ಗೆ ನಿರ್ದೇಶಕರ ಜೊತೆಗೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಡೀನ್ ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News