ಐದನೇ ಬಾರಿ ಅಗ್ರ ಸ್ಥಾನದೊಂದಿಗೆ ವರ್ಷ ಕೊನೆಗೊಳಿಸಿದ ನಡಾಲ್

Update: 2019-11-19 17:59 GMT

ಪ್ಯಾರಿಸ್, ನ.19: ಸ್ಪೇನ್‌ನ ಹಿರಿಯ ಟೆನಿಸ್ ತಾರೆ ರಫೆಲ್ ನಡಾಲ್ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ನಡಾಲ್ ಐದನೇ ಬಾರಿ ನಂ.1 ಸ್ಥಾನದೊಂದಿಗೆ ವರ್ಷವನ್ನು ಕೊನೆಗೊಳಿಸಿದ್ದಾರೆ.

ಕಳೆದ ವಾರ ಲಂಡನ್‌ನಲ್ಲಿ ನಡೆದ ಎಟಿಪಿ ಫೈನಲ್ಸ್‌ನಲ್ಲಿ ನಡಾಲ್ ಗ್ರೂಪ್ ಹಂತವನ್ನು ದಾಟಲು ವಿಫಲರಾಗಿದ್ದರು. ನೊವಾಕ್ ಜೊಕೊವಿಕ್ ಸೆಮಿ ಫೈನಲ್ ತಲುಪಲು ವಿಫಲವಾದ ಕಾರಣ ನಡಾಲ್ 9,985 ಅಂಕಗಳೊಂದಿಗೆ ವರ್ಷವನ್ನು ಅಂತ್ಯಗೊಳಿಸಿದರು. ಸರ್ಬಿಯದ ಜೊಕೊವಿಕ್‌ಗಿಂತ 840 ಅಂಕ ಮುನ್ನಡೆಯಲ್ಲಿದ್ದಾರೆ.

ಅಗ್ರಸ್ಥಾನದೊಂದಿಗೆ ಈ ವರ್ಷ ಅಂತ್ಯಗೊಳಿಸಿರುವ ನಡಾಲ್ ಅವರು ಜೊಕೊವಿಕ್ ಹಾಗೂ ರೋಜರ್ ಫೆಡರರ್ ಸಾಧನೆಯನ್ನು ಸರಿಗಟ್ಟಿದರು. ಈ ಇಬ್ಬರು ಆಟಗಾರರು ಐದು ಬಾರಿ ಈ ಸಾಧನೆ ಮಾಡಿದ್ದರು.ಪೀಟ್ ಸಾಂಪ್ರಾಸ್ ಆರು ಬಾರಿ ವರ್ಷವನ್ನು ನಂ.1 ಸ್ಥಾನದೊಂದಿಗೆ ಅಂತ್ಯಗೊಳಿಸಿದ್ದರು.

ತಲಾ ಎರಡು ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಹಾಗೂ ನಡಾಲ್ ಈ ವರ್ಷ ಪ್ರಾಬಲ್ಯ ಸಾಧಿಸಿರುವ ಇಬ್ಬರು ಆಟಗಾರರಾಗಿದ್ದಾರೆ. ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ಜಯಿಸಿದರೆ, ನಡಾಲ್ ಫ್ರೆಂಚ್ ಓಪನ್ ಹಾಗೂ ಯು.ಎಸ್. ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಫೆಡರರ್ ಸತತ ಎರಡನೇ ಬಾರಿ ವರ್ಷವನ್ನು ದ್ವಿತೀಯ ಸ್ಥಾನದೊಂದಿಗೆ ಅಂತ್ಯಗೊಳಿಸಿದರು. ಆಗಸ್ಟ್‌ನಲ್ಲಿ 38ನೇ ವಯಸ್ಸಿಗೆ ಕಾಲಿಟ್ಟಿರುವ ಫೆಡರರ್ ಗ್ರಾನ್‌ಸ್ಲಾಮ್‌ನತ್ತ ಗಮನ ನೀಡಲು ಟೂರ್ ಟೂರ್ನಿಗಳಿಂದ ದೂರ ಉಳಿದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದ ಫೆಡರರ್ ಸೆಮಿ ಫೈನಲ್‌ನಲ್ಲಿ ಎಡವಿದ್ದರು. ಜೊಕೊವಿಕ್ ವಿರುದ್ಧ ವಿಂಬಲ್ಡನ್ ಫೈನಲ್‌ನಲ್ಲಿ ಸೋತಿದ್ದರು. ಈ ಪಂದ್ಯ ಐದನೇ ಸೆಟ್‌ನಲ್ಲಿ ಟೈ-ಬ್ರೇಕ್‌ನಲ್ಲಿ ನಿರ್ಧರಿತವಾಗಿತ್ತು. ಫೆಡರರ್ ಈಗಲೂ 2020ರಲ್ಲಿ 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಎಟಿಪಿ ಫೈನಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದ ಡೊಮಿನಿಕ್ ಥೀಮ್ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಫೈನಲ್‌ನಲ್ಲಿ ಅವರು ಸ್ಟೆಫನೊಸ್ ಸಿಟ್‌ಸಿಪಾಸ್‌ಗೆ ಸೋತಿದ್ದರು. ಲಂಡನ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿರುವ 21ರ ಹರೆಯದ ಗ್ರೀಕ್ ಆಟಗಾರ ಸಿಟ್‌ಸಿಪಾಸ್ ಆರನೇ ಸ್ಥಾನದೊಂದಿಗೆ ವರ್ಷವನ್ನು ಅಂತ್ಯಗೊಳಿಸಿದ್ದಾರೆ. 240ನೇ ರ್ಯಾಂಕಿನೊಂದಿಗೆ ಈ ವರ್ಷವನ್ನು ಆರಂಭಿಸಿದ್ದ ವಿಶ್ವದ ಮಾಜಿ ನಂ.1 ಆಟಗಾರ ಆ್ಯಂಡಿ ಮರ್ರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೆಪ್ಟಂಬರ್‌ನಲ್ಲಿ 503ನೇ ರ್ಯಾಂಕಿಗೆ ಕುಸಿದಿದ್ದ ಮರ್ರೆ ಆ್ಯಂಟ್‌ವರ್ಪ್ ನಲ್ಲಿ ಯುರೋಪಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿ ಗಮನಾರ್ಹ ಪ್ರದರ್ಶನ ನೀಡುವಮೂಲಕ ವರ್ಷಾಂತ್ಯದಲ್ಲಿ 126ನೇ ರ್ಯಾಂಕಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News