ಬಾಂಗ್ಲಾದ ಮಾಜಿ ವೇಗಿ ಶಹಾದತ್ ಹುಸೆನ್‌ಗೆ 5 ವರ್ಷ ನಿಷೇಧ

Update: 2019-11-19 18:00 GMT

ಢಾಕಾ, ನ.19: ನ್ಯಾಶನಲ್ ಕ್ರಿಕೆಟ್ ಲೀಗ್‌ನಲ್ಲಿ ಸಹ ಆಟಗಾರನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ರಾಷ್ಟ್ರೀಯ ತಂಡದ ಮಾಜಿ ವೇಗದ ಬೌಲರ್ ಶಹಾದತ್ ಹುಸೈನ್ ಅವರಿಗೆ ಐದು ವರ್ಷಗಳ ಕಾಲ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಂಗಳವಾರ ನಿಷೇಧ ವಿಧಿಸಿದೆ.

ರವಿವಾರ ನಡೆದ ರಾಷ್ಟ್ರೀಯ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ತಂಡದ ಸಹ ಆಟಗಾರನಿಗೆ ಶಹಾದತ್ ಕೆನ್ನೆಗೆ ಹೊಡೆದು , ಕಾಲಿನಿಂದ ತುಳಿದಿರುವ ಬಗ್ಗೆ ಅಂಪೈರ್‌ಗಳು ವರದಿ ಮಾಡಿದ್ದರು. ಶಹಾದತ್‌ರ ಇಂತಹ ವರ್ತನೆಗಾಗಿ ರಾಷ್ಟ್ರೀಯ ಒಕ್ಕೂಟವು ಎರಡು ವರ್ಷಗಳ ನಿಷೇಧ ಹೇರಿದೆ. ಆದರೆ ದೈಹಿಕ ಹಲ್ಲೆ ಆರೋಪವನ್ನು ಒಪ್ಪಿಕೊಂಡ ಶಹಾದತ್‌ಗೆ 3 ಲಕ್ಷ ಟಾಕ ( 2.53 ಲಕ್ಷ ರೂ ) ದಂಡ ವಿಧಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಢಾಕಾ ಮತ್ತು ಖುಲ್ನಾ ತಂಡಗಳ ನಡುವಿನ ಪಂದ್ಯದ ವೇಳೆ 33 ವರ್ಷದ ವೇಗದ ಬೌಲರ್ ಶಹಾದತ್ ಅವರು ಯುವ ಬೌಲರ್ ಅರಾಫತ್ ಸನ್ನಿ ಜೂನಿಯರ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ‘‘ಶಹಾದತ್ ಅವರ ಹಿಂದಿನ ನಡವಳಿಕೆಯನ್ನು ಪರಿಗಣಿಸಿ ನಾವು ಅವರಿಗೆ ಐದು ವರ್ಷಗಳ ಕಾಲ ನಿಷೇಧ ವಿಧಿಸಲು ನಿರ್ಧರಿಸಿದ್ದೇವೆ.

ಅವರ ನಿಷೇಧದ ಕೊನೆಯ ಎರಡು ವರ್ಷಗಳು ಕ್ರಿಕೆಟ್‌ನಿಂದ ಅಮಾನತು ಶಿಕ್ಷೆ ಆಗಿರುತ್ತದೆ’’ ಎಂದು ಬಿಸಿಬಿ ತಾಂತ್ರಿಕ ಸಮಿತಿ ಮುಖ್ಯಸ್ಥ ಮಿನ್ಹಾಜುಲ್ ಅಬೆದಿನ್ ಹೇಳಿದ್ದಾರೆ. ಶಹಾದತ್ ಅವರಿಗೆ ಜೀವಾವಧಿ ನಿಷೇಧಿಸಬಹುದಿತ್ತು. ಬಾಂಗ್ಲಾದೇಶದ ಪರ 38 ಟೆಸ್ಟ್ ಮತ್ತು 51 ಏಕದಿನ ಪಂದ್ಯಗಳನ್ನು ಆಡಿದ ಶಹಾದತ್ ಅವರು ಮತ್ತು ಅವರ ಪತ್ನಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಹಿಂಸಿಸಿದ ಆರೋಪದ ಮೇಲೆ 2015 ರಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬಂಧನದಲ್ಲಿದ್ದರು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಶಹಾದತ್ 2018ರಲ್ಲಿ ತನ್ನ ಕಾರಿಗೆ ಢಿಕ್ಕಿ ಹೊಡೆದ ಕಾರಣಕ್ಕಾಗಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News