ಭಾರತ-ಪಾಕಿಸ್ತಾನ ಡೇವಿಸ್ ಕಪ್ ಪಂದ್ಯಕ್ಕೆ ನೂರ್-ಸುಲ್ತಾನ್ ಆತಿಥ್ಯ: ಐಟಿಎಫ್

Update: 2019-11-19 18:01 GMT

ಹೊಸದಿಲ್ಲಿ,ನ.19: ಪಾಕಿಸ್ತಾನದ ಮೇಲ್ಮನವಿಯನ್ನು ತಿರಸ್ಕೃರಿಸಿದ ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್)ಕಝಖ್‌ಸ್ತಾನದ ರಾಜಧಾನಿ ನೂರ್-ಸುಲ್ತಾನ್ ಮುಂಬರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ತಟಸ್ಥ ತಾಣವಾಗಿದೆ ಎಂದು ಘೋಷಿಸಿದೆ.

ಐಟಿಎಫ್ ಡೇವಿಸ್ ಕಪ್ ಸಮಿತಿಯು ನ.29-30ರಂದು ತಟಸ್ಥ ತಾಣದಲ್ಲಿ ಡೇವಿಸ್ ಪಂದ್ಯ ಆಯೋಜಿಸುವ ಕುರಿತು ನ.4ರಂದು ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನ ಟೆನಿಸ್ ಒಕ್ಕೂಟ(ಪಿಟಿಎಫ್) ಮೇಲ್ಮನವಿ ಸಲ್ಲಿಸಿತ್ತು.

ಭಾರತೀಯ ಸಿಖ್ ಯಾತ್ರಾರ್ಥಿಗಳು ಯಾವುದೇ ಭದ್ರತೆಯ ಭಯವಿಲ್ಲದೆ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತೀಯ ಟೆನಿಸ್ ತಂಡ ಇಸ್ಲಾಮಾಬಾದ್‌ನಲ್ಲಿ ಏಕೆ ಪಂದ್ಯ ಆಡುತ್ತಿಲ್ಲ?ಎಂದು ಪಿಟಿಎಫ್ ವಾದ ಮಂಡಿಸಿದೆ. ಪಾಕಿಸ್ತಾನ ಟೆನಿಸ್ ಒಕ್ಕೂಟ(ಪಿಟಿಎಫ್)ಇಸ್ಲಾಮಾಬಾದ್‌ನಿಂದ ಪಂದ್ಯವನ್ನು ಸ್ಥಳಾಂತರಿಸುವ ಕುರಿತಂತೆ ಡೇವಿಸ್ ಕಪ್ ಸಮಿತಿಗೆ ಮೇಲ್ಮನವಿ ಸಲ್ಲಿಸಿತ್ತು. ನ.18ರಂದು ಸೋಮವಾರ ಜಾಗತಿಕ ಆಡಳಿತ ಮಂಡಳಿಯ ಸ್ವತಂತ್ರ ಟ್ರಿಬ್ಯೂನಲ್ ಪಿಟಿಎಫ್ ಮನವಿಯನ್ನು ತಿರಸ್ಕರಿಸಿದೆ ಎಂದು ಐಟಿಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ. ‘‘ತೀವ್ರ ಶೀತದ ವಾತಾವರಣದ ಹಿನ್ನೆಲೆಯಲ್ಲಿ ಪಂದ್ಯಗಳು ಒಳಾಂಗಣದಲ್ಲಿ ಆಡಲಾಗುತ್ತದೆ. ಪ್ರತಿಕೂಲ ವಾತಾವರಣದ ಕಾರಣ ಹೊರಗೆ ಪಂದ್ಯ ಆಡಲು ಸಾಧ್ಯವಾಗುತ್ತಿಲ್ಲ. ಒಳಾಂಗಣದಲ್ಲಿ ಆಡಲು ನಮ್ಮ ಆಟಗಾರರಿಗೆ ಸೂಕ್ತವಾಗುತ್ತದೆ. ನಾವು ಇನ್‌ಡೋರ್‌ನಲ್ಲಿ ಆಡಿದರೂ ನಮ್ಮ ದೇಶಕ್ಕೆ ಇದರಿಂದ ಪರಿಣಾಮಬೀರಲಿದೆ’’ಎಂದು ಭಾರತದ ಕೋಚ್ ಝೀಶಾನ್ ಅಲಿ ಪಿಟಿಐಗೆ ತಿಳಿಸಿದ್ದಾರೆ.

ಡೇವಿಸ್ ಕಪ್ ಪಂದ್ಯ ಮೊದಲಿಗೆ ಸೆಪ್ಟಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿ 370ನ್ನು ರದ್ದುಪಡಿಸಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟ ಬಳಿಕ ಭಾರತ ತನ್ನ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ ಪಂದ್ಯವನ್ನು ನ.29-30ಕ್ಕೆ ಮುಂದೂಡಲಾಯಿತು.

 ಭಾರತ ಸಂಪೂರ್ಣ ಶಕ್ತಿಶಾಲಿ ತಂಡವನ್ನು ಡೇವಿಸ್ ಕಪ್‌ಗೆ ಘೋಷಿಸಿದ್ದು, ಇಸ್ಲಾಮಾಬಾದ್‌ಗೆ ತೆರಳಲು ನಿರಾಕರಿಸಿದ್ದ ಎಲ್ಲ ಅಗ್ರಮಾನ್ಯ ಆಟಗಾರರು ತಟಸ್ಥ ತಾಣದಲ್ಲಿ ಆಡಲು ಒಪ್ಪಿಕೊಂಡಿದ್ದಾರೆ.

ಭಾರತ ತಂಡವನ್ನು ಸಿಂಗಲ್ಸ್ ಆಟಗಾರರಾದ ಸುಮಿತ್ ನಗಾಲ್ ಹಾಗೂ ರಾಮಕುಮಾರ್ ರಾಮನಾಥನ್ ಮುನ್ನಡೆಸಲಿದ್ದು, ಲಿಯಾಂಡರ್ ಪೇಸ್ ಹಾಗೂ ಜೀವನ್ ನೆಡುನ್‌ಚೆಝಿಯನ್ ಡಬಲ್ಸ್‌ನಲ್ಲಿ ಆಡುವ ನಿರೀಕ್ಷೆಯಿದೆ.

ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಭುಜನೋವಿನ ಕಾರಣದಿಂದ ಸೋಮವಾರ ಡೇವಿಸ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಪಾಕಿಸ್ತಾನದ ಶ್ರೇಷ್ಠ ಆಟಗಾರ ಐಸಾಮ್‌ವುಲ್ ಹಕ್ ಖುರೇಶಿ ಡೇವಿಸ್ ಕಪ್ ಪಂದ್ಯವನ್ನು ಬೇರಡೆಗೆ ಸ್ಥಳಾಂತರಗೊಳಿಸಿದ್ದನ್ನು ಪ್ರತಿಭಟಿಸಿ ಟೂರ್ನಿಯಿಂದ ಹೊರಗುಳಿಯುವ ಬೆದರಿಕೆ ಹಾಕಿದ್ದು, ಇದು ಪಾಕಿಸ್ತಾನ ತಂಡವನ್ನು ಮತ್ತಷ್ಟು ದುರ್ಬಲಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News