ಯುರೋ 2020: ಡೆನ್ಮಾರ್ಕ್, ಸ್ವಿಟ್ಸರ್‌ಲ್ಯಾಂಡ್ ಅರ್ಹತೆ

Update: 2019-11-19 18:04 GMT

ಪ್ಯಾರಿಸ್, ನ.19: ಡೆನ್ಮಾರ್ಕ್ ಹಾಗೂ ಸ್ವಿಟ್ಸರ್‌ಲ್ಯಾಂಡ್ ಯುರೋ 2020ರ ಫುಟ್ಬಾಲ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇಟಲಿ 9 ಅಂಕ ಗಳಿಸುವುದರೊಂದಿಗೆ ತನ್ನ ಅರ್ಹತಾ ಅಭಿಯಾನಕ್ಕೆ ಪರಿಪೂರ್ಣ ಅಂತ್ಯ ಹಾಡಿದೆ.

ಮುಂದಿನ ವರ್ಷ ನಡೆಯಲಿರುವ 24 ತಂಡಗಳು ಭಾಗವಹಿಸುತ್ತಿರುವ ಯುರೋಪಿಯನ್ ಚಾಂಪಿಯನ್‌ಶಿಪ್ ಟೂರ್ನಿಗೆ ಅರ್ಹತೆ ಪಡೆಯಲು ಡಬ್ಲಿನ್‌ನಲ್ಲಿ ಐರ್ಲೆಂಡ್ ತಂಡ ಡೆನ್ಮಾರ್ಕ್‌ನ್ನು ಮಣಿಸಲೇಬೇಕಾಗಿತ್ತು. ಆದರೆ, ಮ್ಯಾಟ್ ಡೊಹರ್ಟಿ ಕೊನೆಯ ಕ್ಷಣದಲ್ಲಿ ಹೆಡರ್‌ನ ಮೂಲಕ ಗೋಲು ಗಳಿಸಿ ಡೆನ್ಮಾರ್ಕ್ 1-1ರಿಂದ ಡ್ರಾ ಸಾಧಿಸಲು ನೆರವಾದರು. ಪಂದ್ಯದಲ್ಲಿ ಡ್ರಾ ಸಾಧಿಸುವುದರೊಂದಿಗೆ ‘ಡಿ’ ಗುಂಪಿನಲ್ಲಿ ಡೆನ್ಮಾರ್ಕ್ 2ನೇ ಸ್ಥಾನ ಪಡೆದಿದೆ. 1992ರ ಯುರೋಪಿಯನ್ ಚಾಂಪಿಯನ್ ಡೆನ್ಮಾರ್ಕ್ ತನ್ನದೇ ದೇಶದಲ್ಲಿ ಯುರೋ ಕಪ್ ಆಡಲು ಎದುರು ನೋಡುತ್ತಿದೆ. ಟೂರ್ನಿ ಆತಿಥ್ಯವಹಿಸಿರುವ 12 ನಗರಗಳ ಪೈಕಿ ಕೋಪನ್‌ಹೇಗನ್ ಕೂಡ ಒಂದಾಗಿದೆ.

ಬಿಬ್ರಲ್ಟರ್ ತಂಡವನ್ನು 6-1 ಗೋಲುಗಳ ಅಂತರದಿಂದ ಮಣಿಸಿದ ಸ್ವಿಟ್ಸರ್‌ಲ್ಯಾಂಡ್ ‘ಡಿ’ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಸೆಡ್ರಿಕ್ ಇಟ್ಟೆನ್ ಎರಡು ಗೋಲು ಗಳಿಸಿದರು.

ಈಗಾಗಲೇ ಟೂರ್ನಿಗೆ ಅರ್ಹತೆ ಪಡೆದಿರುವ ಇಟಲಿ ತಂಡ ಅರ್ಮೆನಿಯಾ ತಂಡವನ್ನು 9-1 ಗೋಲುಗಳ ಅಂತರದಿಂದ ಮಣಿಸಿ ತನ್ನ ಅರ್ಹತಾ ಅಭಿಯಾನವನ್ನು ಯಶಸ್ವಿಯಾಗಿ ಅಂತ್ಯಗೊಳಿಸಿತು. 10 ಪಂದ್ಯಗಳ ಪೈಕಿ 10 ರಲ್ಲ್ಲೂ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

ಪ್ರಮುಖ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಅರ್ಹತೆ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಫಿನ್‌ಲ್ಯಾಂಡ್ ತಂಡ ಗ್ರೀಸ್ ವಿರುದ್ಧ 1-2 ಅಂತರದಿಂದ ಸೋಲುಂಡಿದೆ. ಇದೇ ವೇಳೆ ‘ಎಫ್’ ಗುಂಪಿನ ವಿನ್ನರ್ ಸ್ಪೇನ್ ತಂಡ ರೋಮಾನಿಯ ತಂಡವನ್ನು 5-0 ಅಂತರದಿಂದ ಮಣಿಸಿ ತನ್ನ ಅರ್ಹತಾ ಅಭಿಯಾನ ಅಂತ್ಯಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News