16ರ ಹರೆಯದ ವೇಗದ ಬೌಲರ್ ನಸೀಂ ಶಾಗೆ ಅವಕಾಶ ನೀಡಲು ಪಾಕ್ ಚಿಂತನೆ

Update: 2019-11-19 18:05 GMT

ಬ್ರಿಸ್ಬೇನ್, ನ.19: ಯುವ ವೇಗದ ಬೌಲರ್ ನಸೀಂ ಶಾ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಬಲ್ಲರು ಎಂಬ ನಂಬಿಕೆಯಲ್ಲಿರುವ ಪಾಕಿಸ್ತಾನ, 16ರ ಹರೆಯದ ಯುವ ಬೌಲರ್‌ಗೆ ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ.

ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ ‘ಎ’ ವಿರುದ್ಧ ಪಂದ್ಯದಲ್ಲಿ 8 ಓವರ್‌ಗಳ ಸ್ಪೆಲ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದ ಶಾ ಗುರುವಾರದಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ.

ಒಂದು ವೇಳೆ ನಸೀಂ ಶಾ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರೆ ಭಾರತದ ಲೆಜೆಂಡ್ ಸಚಿನ್ ತೆಂಡುಲ್ಕರ್ ಸಹಿತ ಕಿರಿಯ ವಯಸ್ಸಿನಲ್ಲಿ ಟೆಸ್ಟ್‌ನಲ್ಲಿ ಮೊದಲ ಪಂದ್ಯ ಆಡಿದ್ದವರ ಪಟ್ಟಿಗೆ ಸೇರಲಿದ್ದಾರೆ.

ಕ್ರಿಕ್‌ಇನ್‌ಫೋ ಪಟ್ಟಿ ಮಾಡಿರುವ ಅತ್ಯಂತ ಕಿರಿಯ ವಯಸ್ಸಿನ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಹಸನ್ ರಾಝಾ ಅವರಿದ್ದಾರೆ. 1996ರಲ್ಲಿ ತನ್ನ 14ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಆದರೆ, ರಾಝಾ ಅವರ ಜನ್ಮದಿನದ ಬಗ್ಗೆ ವಿವಾದ ಸೃಷ್ಟಿಯಾಗಿದೆ.

‘‘ನಸೀಂ ಶಾ ಬೌಲಿಂಗ್ ಶೈಲಿ ಅತ್ಯುತ್ತಮವಾಗಿದೆ. ಯಾವ ಎಸೆತವನ್ನು ಬೌಲಿಂಗ್ ಮಾಡಬೇಕೆಂದು ಅವರಿಗೆ ಗೊತ್ತಿದೆ. ಅವರು ಉತ್ತಮ ಹಿಡಿತದಲ್ಲಿ ಬೌಲಿಂಗ್ ಮಾಡಬಲ್ಲರು. ಈ ವರ್ಷ ಅವರು ಆಡಿರುವ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯದಲ್ಲೂ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅವರ ಬೌಲಿಂಗ್ ಶೈಲಿಯನ್ನು ನೋಡಿದರೆ ಅವರು ನಮ್ಮ ಪಾಲಿಗೆ ಮ್ಯಾಚ್ ವಿನ್ನರ್ ಆಗಬಹುದು ಎನಿಸುತ್ತದೆ’’ ಎಂದು ಪಿಸಿಬಿ ಅಧಿಕಾರಿ ವಸೀಂ ಖಾನ್ ಹೇಳಿದ್ದಾರೆ.

ನಸೀಂ ಈ ತನಕ ಕೇವಲ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳಾದ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಈ ವರ್ಷ ಮುಹಮ್ಮದ್ ಆಮಿರ್ ಹಾಗೂ ವಹಾಬ್ ರಿಯಾಝ್ ನಿವೃತ್ತಿಯಿಂದಾಗಿ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಸೊರಗಿದೆ. ಹೀಗಾಗಿ 19ರ ಹರೆಯದ ವೇಗದ ಬೌಲರ್‌ಗಳಾದ ಮುಸಾ ಖಾನ್ ಹಾಗೂ ಶಾಹೀನ್ ಅಫ್ರಿದಿ ಪಾಕ್‌ನ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮುಹಮ್ಮದ್ ಅಬ್ಬಾಸ್ ಹಾಗೂ ಲೆಗ್ ಸ್ಪಿನ್ನರ್ ಯಾಸಿರ್ ಶಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News