ಜೆಎನ್‍ಯು ಪ್ರತಿಭಟನಾಕಾರರ ಕುರಿತ ನಕಲಿ ಚಿತ್ರಗಳ ಹಾವಳಿ

Update: 2019-11-20 06:34 GMT
ಫೋಟೊ : boomlive.in

ಹೊಸದಿಲ್ಲಿ : ಕಳೆದ ಹಲವಾರು ದಿನಗಳಿಂದ ಶುಲ್ಕ ಏರಿಕೆ ವಿರೋಧಿಸಿ ಜೆಎನ್‍ಯು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವಂತೆಯೇ ಪ್ರತಿಭಟನಾಕಾರರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುವ ಯತ್ನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಚಿತ್ರಗಳನ್ನು ಬಳಸಲಾಗುತ್ತಿರುವುದು ಕಂಡು ಬಂದಿದೆ.

ಇಂತಹ ಕೆಲವು ಉದಾಹರಣೆಗಳು ಇಂತಿವೆ

1. ಪ್ರತಿಭಟನಾನಿರತ ವಿದ್ಯಾರ್ಥಿಗಳ ಶೋಕಿ ಜೀವನ ಶೈಲಿಯನ್ನು ಬಿಂಬಿಸಲೆಂಬಂತೆ ಬಿಜೆಪಿಯ ಹರ್ಯಾಣ ವಕ್ತಾರ ರಮಣ್ ಮಲಿಕ್ ಅವರು ಕೈಯ್ಯಲ್ಲಿ ಮದ್ಯದ ಬಾಟಲಿ ಹಿಡಿದಿರುವ ಯುವತಿಯೋರ್ವಳ ಚಿತ್ರದ ಜತೆಗೆ ಜೆಎನ್‍ಯು ಪ್ರತಿಭಟನೆಯಲ್ಲಿ ಪೋಸ್ಟರ್ ಒಂದನ್ನು ಹಿಡಿದಿರುವ ಯುವತಿಯ ಚಿತ್ರ ಪ್ರಕಟಿಸಿ ಎರಡೂ ಚಿತ್ರಗಳಲ್ಲಿ ಕಾಣಿಸಿರುವ ಯುವತಿ ಒಬ್ಬರೇ ಎಂದು ಬರೆದಿದ್ದರು. ಆದರೆ www.boomlive.in ಈ ಚಿತ್ರದ ರಿವರ್ಸ್ ಸರ್ಚ್ ಮಾಡಿದಾಗ ಹಿಂದೆಯೂ ಹಲವು ಬಾರಿ ಅಂತರ್ಜಾಲದಲ್ಲಿ ಮಹಿಳೆಯರ ಮದ್ಯಪಾನ ಕುರಿತಂತೆ ಈ ಚಿತ್ರ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿತ್ತು.

ಚಿತ್ರದಲ್ಲಿ ಪೋಸ್ಟರ್ ಕೈಯ್ಯಲ್ಲಿ ಹಿಡಿದು ನಿಂತಿರುವ ಜೆಎನ್‍ಯು ವಿದ್ಯಾರ್ಥಿನಿ ಪ್ರಿಯಾಂಕ ಭಾರತಿ ಮದ್ಯದ ಬಾಟಲಿ ಹಿಡಿದುಕೊಂಡ ಯುವತಿ ತಾನಲ್ಲ ಎಂದು ಹೇಳುತ್ತಾರೆ.

2.  ಸಾಮಾಜಿಕ ಕಾರ್ಯಕರ್ತೆ ಅನ್ನೀ ರಾಜಾ ಅವರನ್ನು ದಿಲ್ಲಿ ಪೊಲೀಸರು ಬಂಧಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿದ್ದು  ಜೆಎನ್‍ಯು ಮೊದಲ ವರ್ಷ ವಿದ್ಯಾರ್ಥಿನಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆಂದು ಎಥೀಸ್ಟ್ ಕೃಷ್ಣ ಫ್ಯಾನ್ ಕ್ಲಬ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರ ಪೋಸ್ಟ್ ಆಗಿದೆ. ವಾಸ್ತವವಾಗಿ ಮಾಜಿ ಸಿಜೆಐ ರಂಜನ್ ಗೊಗೊಯಿ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದನ್ನು ವಿರೋಧಿಸಿ ಮೇ 2019ರಲ್ಲಿ ನಡೆದ ಪ್ರತಿಭಟನೆ ವೇಳೆ ಜೋಸೆಫ್ ಅವರನ್ನು ಬಂಧಿಸುವ ಚಿತ್ರ ಇದಾಗಿದೆ.

3. ಪಾಕಿಸ್ತಾನದ ಲಾಹೋರ್ ನಲ್ಲಿ ಫೈಝ್ ಸಾಹಿತ್ಯೋತ್ಸವ ಸಂದರ್ಭ ನಡೆದ ಪ್ರತಿಭಟನೆಯ ವೀಡಿಯೊವನ್ನು ಜೆಎನ್‍ಯು ಪ್ರತಿಭಟನೆಯೆಂದು, 'ಆಝಾದಿ' ಘೋಷಣೆಯನ್ನು ವಿದ್ಯಾರ್ಥಿಗಳು ಕೂಗುತ್ತಿರುವ ಈ ವೀಡಿಯೊವನ್ನು 'ಜೆಎನ್‍ಯು ಫಾರ್ ಯು' ಎಂಬ ಶೀರ್ಷಿಕೆಯೊಂದಿಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ.

4.ಝೀ ನ್ಯೂಸ್‍ನಲ್ಲಿ ಪ್ರಸಾರವಾದ ಒಂದು ಕ್ಲಿಪ್ ಕೂಡ ವೈರಲ್ ಆಗಿತ್ತು. ಅದು ಜೆಎನ್‍ಯುವಿನ 43 ವರ್ಷದ ವಿದ್ಯಾರ್ಥಿನಿಯ ಚಿತ್ರವೆಂದು ಹೇಳಲಾಗಿತ್ತಲ್ಲದೆ ಆಕೆಯ ಪುತ್ರಿ ಕೂಡ ಜೆಎನ್‍ಯು ವಿದ್ಯಾರ್ಥಿನಿ ಎಂದು ವಿವರಿಸಲಾಗಿತ್ತು. ಆದರೆ ಆ ಚಿತ್ರ ಜೆಎನ್‍ಯುವಿನ ಫ್ರೆಂಚ್ ವಿಭಾಗದ ಸ್ನಾತ್ತಕೋತ್ತರ ವಿದ್ಯಾರ್ಥಿನಿ 23 ವರ್ಷದ ಶಾಂಭವಿ ಸಿದ್ಧಿಯದ್ದಾಗಿತ್ತು.

5. ಶೆಹ್ಲಾ ರಶೀದ್ ಅವರ ತಿರುಚಿದ ಚಿತ್ರ- ಜೆಎನ್‍ಯು ವಿದ್ಯಾರ್ಥಿ ಯೂನಿಯನ್‍ನ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಅವರು ಪಾಕಿಸ್ತಾನದ ಧ್ವಜದ ಚಿತ್ರವಿರುವ ಹಸಿರು ಸೀರೆ ಉಟ್ಟ ಚಿತ್ರ ಪೋಸ್ಟ್ ಮಾಡಿ ಭಾರತದಲ್ಲಿ ಹಾಗೂ ವಿದೇಶದಲ್ಲಿ ಅವರು ಹೇಗಿರುತ್ತಾರೆಂದು ವಿವರಿಸುವ ಯತ್ನ ನಡೆಸಲಾಗಿತ್ತು.  ಮೂಲ ಚಿತ್ರ ಮ್ಯಾನ್‍ಹಟ್ಟಾನ್ ನಲ್ಲಿ ತೆಗೆಯಲಾಗಿತ್ತಾದರೂ ಅದರಲ್ಲಿ ಪಾಕಿಸ್ತಾನದ ಧ್ವಜವಿರುವ ಸೀರೆಯಿರಲಿಲ್ಲ, ಈ ಫೋಟೊ ತಿರುಚಲಾಗಿದೆಯೆಂಬುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News