ಸಿಒಪಿಡಿ ಖಾಯಿಲೆಗೆ ಸಮಗ್ರ ಚಿಕಿತ್ಸೆ ಯಾಕೆ ? ಯಾವುದು?

Update: 2019-11-20 16:15 GMT

“COPD ಯನ್ನು ಕೊನೆಗೊಳಿಸಲು ಎಲ್ಲರು ಒಟ್ಟು ಸೇರಿ” ಎಂಬ ಧ್ಯೇಯದೊಂದಿಗೆ ನ. 21 ವಿಶ್ವ COPD ಜಾಗೃತಿ ದಿನವಾಗಿ ಗುರುತಿಸಲಾಗಿದೆ.

ಶ್ವಾಸಕೋಶ ಖಾಯಿಲೆಯಲ್ಲಿ ಒಂದಾದ COPD ಯು ಧೀರ್ಘಕಾಲದ ಶ್ವಾಸಕೋಶ ಸಂಬಂಧಿ ಖಾಯಿಲೆ ಅಂದರೆ Chronic Obstructive Pulmonary Diesases (COPD) ಎಂದು ಕರೆಯಲ್ಪಡುತ್ತದೆ. ವಾಸ್ತವವಾಗಿ ಅಸ್ತಮಾ ಖಾಯಿಲೆಯ ಲಕ್ಷಣಗಳು ಕಂಡು ಬಂದರೂ COPD ಖಾಯಿಲೆ ಅಸ್ತಮಾ ಖಾಯಿಲೆಯಲ್ಲ. ಯಾರು ಬೇಗನೆ ಸುಸ್ತಾಗುತ್ತಾರೋ, ಬೇಗನೆ ಕಫ ಕೆಮ್ಮಿನಿಂದ ಬಳಲುತ್ತಾರೋ, ಮೆಟ್ಟಿಲು ಅಥವಾ ಎತ್ತರದ ಪ್ರದೇಶ ಹತ್ತಲು ಕಷ್ಟಪಡುತ್ತಾರೋ, ಉಸಿರಾಟ ಮಾಡುವಾಗ ಶಬ್ದ ಬರುತ್ತದೋ ಅಂತಹ ಲಕ್ಷಣಗಳನ್ನು ಒಳಗೊಂಡಿರುವುದೇ COPD ಖಾಯಿಲೆಯ ಅಂಶಗಳಾಗಿರುತ್ತವೆ.

ಅಸ್ತಮವು ವಂಶ ಪಾರಂಪರ್ಯವಾಗಿ ಚಿಕ್ಕ ಪ್ರಾಯದಲ್ಲಿ ಯಾ ಇನ್ನಾವುದೇ ವಯಸ್ಸಿನಲ್ಲಿ ಕಂಡು ಬಂದರೆ, COPD ಸುಮಾರು 40 ವರ್ಷದ ನಂತರ ಕಂಡು ಬರುವುದು ಸಾಮಾನ್ಯ. ಹವಮಾನ ಏರುಪೇರಿನಲ್ಲಿ, ವಾತಾವರಣದ ಬದಲಾವಣೆಯಲ್ಲಿ, ಆಹಾರ ಅಥವಾ  ಇನ್ನಾವುದೇ ಪರಿಮಳದ ಪರಿಣಾಮದಿಂದ ಅಸ್ತಮದ ಲಕ್ಷಣಗಳು ಕಂಡುಬರುವುದು. COPDಯು ಧೂಳು, ಹೊಗೆ, ಕೆಲವು ರಸಾಯನಿಕಗಳು, ಹವಮಾನ ವ್ಯತ್ಯಾಸ, ಶ್ವಾಸಕೋಶದ ಸೋಂಕು, ರೋಗ ನಿರೋಧಕ ಪ್ರಮಾಣ ಕಡಿಮೆ ಯಾಗುವುದರಿಂದ ಪ್ರಾರಂಭವಾಗುವುದು. ದೀರ್ಘಕಾಲ ಅಸ್ತಮದಿಂದ ಬಳಲಿದವರು COPD ರೋಗಿಗಳಾಗಬಹುದು. 

ವಿಶ್ವ ಜನಸಂಖ್ಯೆಯಲ್ಲಿ 2016 ರಲ್ಲಿ 251 ಮಿಲಿಯನ್ ಜನರು COPD ಖಾಯಿಲೆಗೆ ತುತ್ತಾಗಿದ್ದಾರೆ. ವೇಗವಾಗಿ ಮರಣವನ್ನಪ್ಪುವ ಕಾಯಿಲೆಯಲ್ಲಿ COPDಯೂ ಮೂರನೇ ಖಾಯಿಲೆಯಾಗಿದೆ ಎಂದು ಸಂಶೋಧಕರು ವಿಶ್ಲೇಷಿಸುತ್ತಾರೆ.

COPDಗೆ ಕಾರಣಗಳೇನು?

ಬೇರೆ  ಬೇರೆ ಕಾರಣಗಳಿಂದ COPD ಖಾಯಿಲೆ ಬರಬಹುದು. ಪ್ರಮುಖವಾಗಿ ಹೊಗೆ ಸೇವನೆ, ಅಡುಗೆ ಹೊಗೆ, ವಾಹನದಿಂದ ಬರುವ ಹೊಗೆ, ಬೀಡಿ, ಸಿಗರೇಟು ಸೇದುವುದರಿಂದ, ಬೇರೆಯವರು ಸೇದುವ ಹೊಗೆಯನ್ನು ಇತರರು ಸೇವಿಸುವುದರಿಂದ ಬರಬಹುದು.

ಇತ್ತೀಚೆಗೆ ಪಂಜಾಬಿನಲ್ಲಿ ತೀವ್ರವಾದ ಶ್ವಾಸಕೋಶ ಖಾಯಿಲೆ ಕಂಡು ಬಂದಿರುವುದು ಇದೇ ಹೊಗೆಯಿಂದ. ಅಲ್ಲಿ ಕೃಷಿ ಕಾರ್ಯ ಮುಗಿದ ನಂತರ ಗದ್ದೆಗಳಿಗೆ ಬೆಂಕಿ ಹಾಕಿ ಉಂಟಾದ ಹೊಗೆಯು ವಾತಾವರಣವನ್ನು ಕಲುಷಿತ ಗೊಳಿಸುವುದರೊಂದಿಗೆ ಶ್ವಾಸಕೋಶ ಸಮಸ್ಯೆ ಉಂಟಾಯಿತು. ಧೂಳು ತುಂಬಿರುವ ವಾತಾವರಣದಲ್ಲಿ ದೀರ್ಘಕಾಲ ಕೆಲಸ ಮಾಡುವವರಿಗೆ COPD ಬರಬಹುದು. ಅದು ಮರದ ಕೆಲಸ, ಸಿಮೆಂಟು, ಇಟ್ಟಿಗೆ, ಕಾರ್ಖಾನೆಯ ಧೂಳುಗಳು COPDಗೆ ಕಾರಣವಾಗಬಹುದು. ಬೀಡಿ ಕಟ್ಟುವುದು, ಬೀಡಿ ತೆಗೆಯುವುದು, ಬೀಡಿ ಕಾಯಿಸುವುದು, ಪ್ಯಾಕ್ ಮಾಡುವುದು ಇತ್ಯಾದಿ ಕೆಲಸ ಮಾಡುವವರಲ್ಲಿಯೂ COPD ಕಂಡುಬರಬಹುದು.

COPD ಇದೆಯೋ ತಿಳಿಯುವುದು ಹೇಗೆ ? ಆಗಾಗ ಕಫ, ಕೆಮ್ಮುನಿಂದ ಬಳಲುತ್ತಿದ್ದಾರೆ. ನಡೆಯುವಾಗ ಬೇಗನೆ ಸುಸ್ತಾಗುತ್ತದೆ ಅನಿಸಿದರೆ ವೈದ್ಯರನ್ನು ಸಂದರ್ಶಿಸಬೇಕು. ಶ್ವಾಸಕೋಶ ತಜ್ಞ ವೈದ್ಯರು ಅಥವಾ ಸಾಮಾನ್ಯ ವೈದ್ಯಕೀಯ ವಿಭಾಗದ ವೈದ್ಯರ ಮಾರ್ಗದರ್ಶನದೊಂದಿಗೆ ಶ್ವಾಸಕೋಶದ  ಕಾರ್ಯದ ತಪಾಸಣೆ (PFT) ಮಾಡಿಸಬೇಕು. ಆಗ ಅಸ್ತಮವೋ COPDಯೋ ಎಂದು ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತದೆ. PFT ಪರೀಕ್ಷೆಯ ಮೂಲಕ COPDಯ ಹಂತವನ್ನು ಅರಿಯಬಹುದು.

ಸಾಮ್ಯ (MILD COPD), ಮಧ್ಯಮ (Moderate COPD), ಗಂಭೀರ (Severe COPD), ತೀ ಗಂಭೀರ (Very Severe COPD) ಎಂದು ನಾಲ್ಕು ಹಂತಗಳಲ್ಲಿ COPD ಯನ್ನು ವರ್ಗೀಕರಿಸಲಾಗಿದೆ. ಪ್ರತಿ ಹಂತದಲ್ಲಿ ಶ್ವಾಸಕೋಶದ ಸಮಸ್ಯೆಯೊಂದಿಗೆ ಇನ್ನಿತರ ಆರೋಗ್ಯ ಸಮಸ್ಯೆ ಕಂಡುಬರುವುದು ಸರ್ವೇ ಸಾಮಾನ್ಯ. ಪ್ರಾರಂಭದಲ್ಲಿ ಜ್ವರ, ಶೀತ ಆಗುವುದು ಕ್ರಮೇಣ ಹೃಯದ ಸಂಬಂಧಿ ಖಾಯಿಲೆ ಡಯಾಬಿಟಿಸ್, ನಿದ್ರಾಹೀನತೆ, ಖಿನ್ನತೆ, ತೂಕ ಕಡಿಮೆಯಾಗುವುದು ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ.

COPDಯ ಸಮಗ್ರ ನಿರ್ವಹಣೆ 

ನಿರಂತರ ಅಥವಾ ಬದಲಾಯಿಸಲಾಗದ COPD ಖಾಯಿಲೆಯು ಹಂತ ಹಂತವಾಗಿ ಹೆಚ್ಚಾಗದ ರೀತಿಯಲ್ಲಿ ಸಮಗ್ರ ಪರಿಹಾರವನ್ನು ಕಂಡುಕೊಳ್ಳಬೇಕು. ಶ್ವಾಸಕೋಶ ತಜ್ಞರು, ಮನೋವೈದ್ಯರು, ಪುನರ್ವಸತಿ ತಜ್ಞರಾಗಿ ಯೋಗ ಚಿಕಿತ್ಸಕರು, ಉಸಿರಾಟ ಚಿಕಿತ್ಸಕರು, ವ್ಯಾಯಾಮ ಚಿಕಿತ್ಸಕರು, ಆಹಾರ ತಜ್ಞರು, ಹಾಗೂ ವೈದ್ಯಕೀಯ ಸಮಾಜ ಸೇವಾ ಆಪ್ತ ಸಮಾಲೋಚಕರ ಹಾಗೂ ಸರಕಾರದ ಯೋಜನೆಗಳ ಒಂದುಗೂಡಿಕೆಯ ಚಿಕಿತ್ಸಾ ಮಾರ್ಗದರ್ಶನವು COPD  ರೋಗಿಯ ಆರೋಗ್ಯ ಉತ್ತಮ ಪಡಿಸಲು ಸಾಧ್ಯವಾಗುತ್ತದೆ. ಮತ್ತು COPD ತಡೆಯಬಹುದು.

ಶ್ವಾಸಕೋಶ ತಜ್ಞರು, ಮತ್ತು ವೈದ್ಯಕೀಯ ಚಿಕಿತ್ಸೆ

ವೈದ್ಯರು ರೋಗಿಯ ಬಲ ಮತ್ತು ರೋಗ ಬಲದ ಆಧಾರದಲ್ಲಿ ಔಷಧಿಯ ಚಿಕಿತ್ಸೆಯನ್ನು ನೀಡುವರು. COPD ಹಂತದ ಮತ್ತು ಸಹ ಅಸ್ವಸ್ಥತೆಯ ಆಧಾರದಲ್ಲಿ ಯಾವ ಮತ್ತು ಎಷ್ಟು ಔಷಧಿ ತೆಗೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡುವರು. ಚಿಕಿತ್ಸೆ ಆಯ್ಕೆಯೊಂದಿಗೆ ಅದನ್ನು ನಿರ್ವಹಣೆ ಮಾಡುವ ಮಾರ್ಗದರ್ಶನವನ್ನು ಸೂಚಿಸುವರು.

ಮನೋವೈದ್ಯ ಚಿಕಿತ್ಸಕರು

COPDಗೆ ಧೂಮಪಾನ ಒಂದು ಪ್ರಮುಖ ಕಾರಣವಾಗಿರುವುದರಿಂದ ಧೂಮಪಾನ ಚಟದಿಂದ  ಮುಕ್ತರಾಗಲು ಆಪ್ತ ಸಮಾಲೋಚನೆ ಹಾಗೂ ಔಷಧಿ ನೀಡುವರು. COPD ಸಹ ಅಸ್ವಸ್ಥತೆಯಲ್ಲಿ ಖಿನ್ನತೆಯು ಒಂದು ಪ್ರಮುಖ ಖಾಯಿಲೆ ಯಾಗಿರುವುದರಿಂದ ಖಿನ್ನತೆಯ ಸಂಬಂಧಿಸಿದ ಚಿಕಿತ್ಸಾ ವಿಧಾನವನ್ನು ಮನೋ ವೈದ್ಯರು ನಿರ್ವಹಿಸುವರು. 

ಪುನರ್ ವಸತಿ ಚಿಕಿತ್ಸೆ

ದೀರ್ಘಕಾಲಿಕ ಖಾಯಿಲೆಯಾಗಿರುವ COPDಗೆ ಔಷಧಿಯ ಚಿಕಿತ್ಸೆಯೊಂದಿಗೆ ಪುನರ್ ವಸತಿ ಚಿಕಿತ್ಸಾ ಕ್ರಮ ಬಹಳ ಅಗತ್ಯವಾಗಿರುತ್ತದೆ. ಯೋಗದ ಚಿಕತ್ಸಾ ಪದ್ಧತಿ, ವ್ಯಾಯಾಮ ಚಿಕಿತ್ಸೆ ಇತ್ಯಾದಿಗಳು ರೋಗಿಯ ರೋಗ ನಿರ್ವಹಣೆಗೆ ಅಗತ್ಯವಾಗಿದೆ.

ಆಹಾರ ತಜ್ಞರ ಸಲಹೆ

ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸಿದರೂ ಹಲವಾರು ಆಹಾರಗಳು COPD ಖಾಯಲೆ ಉಲ್ಬಣಗೊಳ್ಳಲು ಕಾರಣ ವಾಗಬಹುದು.  ವಿಶೇಷವಾಗಿ ಕಫ ಪ್ರಕೋಪವಿರುವುದು ಅಂದರೆ ಹೆಚ್ಚು ನೀರಿನಾಂಶ ಹಾಗೂ ಶೀತದ ಗುಣವಿರುವ ಆಹಾರಗಳು COPDಗೆ ಅಡ್ಡ ಪರಿಣಾಮ ಉಂಟು ಮಾಡಿದರೆ ಹಲವಾರು ಪೌಷ್ಟಿಕಾಂಶ ಅಂಶಗಳು ದೇಹದ ಮಾಂಸಖಂಡಗಳ ಸುಸ್ಥಿತಿಗೆ ಸಹಕಾರಿಯಾಗುತ್ತದೆ. ಅಂತಹ ಆಹಾರದ ಬಗ್ಗೆ ಆಹಾರ ತಜ್ಞರ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿರುತ್ತದೆ.

ಯೋಗ ಚಿಕಿತ್ಸೆ ಹೇಗೆ ? ಯಾವುದು ?

ಅಷ್ಟಾಂಗ ಯೋಗದ ಯಮ ಮತ್ತು ನಿಯಮದ ಅಭ್ಯಾಸ ರೋಗಿಗೆ ಆತ್ಮಸ್ಥೈರ್ಯವನ್ನು ನೀಡುವುದರೊಂದಿಗೆ ಮಾನಸಿಕ ವಿಶ್ವಾಸ ಬೆಳಸಿಕೊಳ್ಳಲು ಪ್ರೇರಣೆಯಾಗುತ್ತದೆ.  ಆಯ್ದ ಯೋಗಾಸನಗಳು ರೋಗಿಯ ಉಸಿರಾಟ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಪ್ರಾಣಾಯಾಮದ ಅಭ್ಯಾಸವು ರೋಗಿಯ ಪ್ರತೀ ಜೀವಕೋಶಕ್ಕೆ ಸಮರ್ಪಕವಾದ  ಪ್ರಾಣ ಚೈತನ್ಯವನ್ನು ನೀಡುವುದರೊಂದಿಗೆ ರೋಗಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಉತ್ತಮ ಪಡಿಸಲು ಸಹಕಾರಿಯಾಗಿತ್ತದೆ. ಪ್ರತ್ಯಾಹಾರದ ಧಾರಣ, ಧ್ಯಾನ, ಸಮಾಧಿಯ ಅಂಶಗಳು ರೋಗಿಯ ಮನೋಬಲವನ್ನು ಉತ್ತಮ ಪಡಿಸುವುದರೊಂದಿಗೆ COPD ಯೊಂದಿಗೂ ಉತ್ತಮ ಜೀವನ ನಡೆಸಲು ಪೂಕರವಾಗುತ್ತದೆ.

ವೈದ್ಯಕೀಯ ಸಮಾಜ ಸೇವಾ ಕಾರ್ಯ

COPD ಖಾಯಿಲೆಯ ಬಗ್ಗೆ ಪ್ರಾರಂಭದ ಹಂತದಿಂದ ಕೊನೆಯ ಹಂತದವರೆಗೂ ರೋಗದ ಕಾರಣಗಳು, ರೋಗದ ನಿರ್ವಹಣೆ ಆರ್ಥಿಕ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡುವುದು ಅಗತ್ಯ. ಆರ್ಥಿಕವಾಗಿ ಪ್ರಾರಂಭದ ಹಂತದಲ್ಲಿ ವೈದ್ಯಕೀಯ ವೆಚ್ಚ ಕಡಿಮೆ ಬಂದರೂ, ತೀವ್ರ ಹಂತದ COPD ಯ ಸನ್ನಿವೇಶದಲ್ಲಿ ಆರ್ಥಿಕ ವೆಚ್ಚ ಜಾಸ್ತಿಯಾಗುತ್ತದೆ. ಈ ಹಂತದಲ್ಲಿ ರೋಗಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುವುದರಿಂದ ರೋಗಿಯು ತನ್ನೆಲ್ಲ ಖರ್ಚುಗಳಿಗೆ ಇನ್ನೊಬ್ಬರನ್ನು ಅವಲಂಬಿಸ ಬೇಕಾಗುತ್ತದೆ. ಈ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ, ಔಷಧಿ ಹಾಗೂ ರೋಗಿಯ ವೈಯಕ್ತಿಕ ಆರ್ಥಿಕ ವೆಚ್ಚವನ್ನು ಕುಟುಂಬದ ಸದಸ್ಯರು, ಸಂಘ ಸಂಸ್ಥೆಗಳು, ಸರಕಾರ ಹೇಗೆ ನಿರ್ವಹಿಸಬೇಕು ಎಂದು ಸಮಾಜ ಸೇವಾ ಕಾರ್ಯ ವೃತ್ತಿಪರರು ವಿವರಿಸುತ್ತಾರೆ. 

ಸರಕಾರದ ಪಾತ್ರ

COPDಗೆ ಕಾರಣವಾಗುವ ಅಂಶವನ್ನು ನಿಯಂತ್ರಿಸಲು ಸರಕಾರ ಕಾರ್ಯ ಪ್ರವೃತ್ತರಾಗಬೇಕು. ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ, ಧೂಮಪಾನ ನಿಷೇಧ ಪರಿಣಾಮಕಾರಿಯಾಗಿ ಆಗಬೇಕು. ಸಾರ್ವಜನಿಕ ರೋಗ  ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

ಉಜ್ವಲ ಯೋಜನೆ ಫಲಕಾರಿಯಾಗಬಲ್ಲದು : “ಈಗ ಗ್ಯಾಸ್ ಬಂದಿದೆ ರೋಗ ಇಲ್ಲ” ಎಂಬ ಧ್ಯೇಯ ವಾಕ್ಯ. COPD ನಿಯಂತ್ರಣಕ್ಕೂ ಒಂದು ಪರಿಣಾಮಕಾರಿಯಾದ ಯೋಜನೆಯಾಗಬಲ್ಲದು. ಕೇಂದ್ರ ಸರಕಾರದ ಉಜ್ವಲ ಯೋಜನೆ  ಕುಟುಂಬವನ್ನು COPD ಯಿಂದ ಮುಕ್ತಗೊಳಿಸಬಹುದು.

ಇನ್ನು ತೀವ್ರ COPD ಹಂತದಲ್ಲಿ ಚಿಕಿತ್ಸಾ ಸಂದರ್ಭ  ರೋಗಿಯ ವೈದ್ಯಕೀಯ ವೆಚ್ಚ, ನಿರ್ವಹಣಾ ವೆಚ್ಚದ ಬಗ್ಗೆ ಸರಕಾರ ಯೋಜನೆ ಮಾಡುವುದು ಉತ್ತಮ. “COPD ಕೊನೆಗೊಳ್ಳಲು ಎಲ್ಲರೂ ಒಟ್ಟು ಸೇರಿ” ಎಂಬ ಧ್ಯೇಯದಂತೆ ಕಾರ್ಯ ಪ್ರವೃತ್ತರಾಗುವ  ದಿನವೇ ನ. 21 ವಿಶ್ವ COPD ದಿನ.

- ಕುಶಾಲಪ್ಪ ಗೌಡ, ಚಿಕಿತ್ಸಾತ್ಮಕ ಯೋಗದ ಸಂಶೋಧಕರು
ಶ್ವಾಸಕೋಶ ಚಿಕಿತ್ಸಾ ವಿಭಾಗ/ ಯೆನೆಪೋಯ ಸಂಶೋಧನಾ ಕೇಂದ್ರ, ಮಂಗಳೂರು
yogaavishkar@gmail.com ಮೊ. : 9845588740

Writer - ಕುಶಾಲಪ್ಪ ಗೌಡ

contributor

Editor - ಕುಶಾಲಪ್ಪ ಗೌಡ

contributor

Similar News