ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಅಗತ್ಯ: ಎಚ್.ಆಂಜನೇಯ

Update: 2019-11-20 13:07 GMT

ಬೆಂಗಳೂರು, ನ.20: ಪರಿಶಿಷ್ಟ ಜಾತಿ(ಎಸ್ಸಿ) ಸಮುದಾಯದ ಶೇಕಡವಾರು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಅವರು, ಹಲವು ದಶಕಗಳಿಂದ ಎಸ್ಸಿ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿಯ ಪ್ರಮಾಣದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ, ಎಸ್ಸಿ ಪಟ್ಟಿಗೆ ಹಲವು ಶೋಷಿತ ಸಮುದಾಯಗಳು ಸೇರಿಕೊಂಡಿವೆ. ಇದರಿಂದ ಎಸ್ಸಿ ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವುದು ಸಾಮಾಜಿಕ ನ್ಯಾಯ ಹಾಗೂ ವೈಜ್ಞಾನಿಕತೆಯಿದ ಕೂಡಿರುವಂತಹದ್ದಾಗಿದೆ ಎಂದರು.

ರಾಜ್ಯ ಸರಕಾರ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿವೃತ್ತ ನ್ಯಾ.ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ. ಈ ಆಯೋಗದ ಮುಂದೆ ಪರಿಶಿಷ್ಟ ಜಾತಿ(ಎಸ್ಸಿ) ಸಮುದಾಯಕ್ಕೆ ಮೀಸಲಾತಿಯ ಹೆಚ್ಚಳದ ಅಗತ್ಯತೆ ಹಾಗೂ ಅಂಕಿಅಂಶಗಳ ಸಮೇತವಾದ ವೈಜ್ಞಾನಿಕ ರೀತಿಯಲ್ಲಿ ಮಂಡಿಸಬೇಕಾದ ಅಗತ್ಯವಿದೆ. ಹೀಗಾಗಿ ಸಮುದಾಯದ ಚಿಂತಕರು ಈ ಬಗ್ಗೆ ಕಾರ್ಯಮಗ್ನರಾಗಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಇ.ವೆಂಕಟಯ್ಯ ಮಾತನಾಡಿ, ರಾಜ್ಯದಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಸಮುದಾಯಕ್ಕೆ ಒಟ್ಟು ಶೇ.50ರಷ್ಟು ಮೀಸಲಾತಿ ಇದೆ. ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ದೇಶಾದ್ಯಂತ ಒತ್ತಾಯ ಕೇಳಿ ಬರುತ್ತಿದೆ. ಇದರ ಬೆನ್ನೆಲ್ಲೆ ಮಹಾರಾಷ್ಟ್ರ, ಛತೀಸ್‌ಘಡ, ಈಶಾನ್ಯ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಅದೇ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕಿದೆ ಎಂದು ತಿಳಿಸಿದರು.

ಇವತ್ತಿಗೂ ಪರಿಶಿಷ್ಟ ಜಾತಿ ಸಮುದಾಯ ಕೈಗಾರಿಕಾ ಕ್ಷೇತ್ರದಲ್ಲಿ ಶೇ.1ರಷ್ಟು ಪ್ರಗತಿ ಸಾಧಿಸಿಲ್ಲ. ಕೃಷಿ ಕ್ಷೇತ್ರದಲ್ಲೂ ಭೂಮಿ ಉಳ್ಳವರ ಸಂಖ್ಯೆ ತೀರ ಕಡಿಮೆಯಿದೆ. ಇದ್ದರೂ ಎರಡು-ಮೂರು ಎಕರೆಗಿಂತ ಹೆಚ್ಚಿರುವುದಿಲ್ಲ. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಇತರೆ ಸಮುದಾಯಗಳ ಪ್ರಗತಿಯನ್ನು ಹೋಲಿಸಿದರೆ ಪರಿಶಿಷ್ಟ ಜಾತಿ ಸಮುದಾಯ ಹಿಂದುಳಿದಿದೆ. ಹೀಗಾಗಿ ಸಾಮಾಜಿಕ ನ್ಯಾಯ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕಿದೆ ಎಂದು ಅವರು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಮಾತನಾಡಿ, ಸರಕಾರಿ ವಲಯದಲ್ಲಿ ಶೇ.3ಕ್ಕಿಂತ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಹೀಗಾಗಿ ಇಲ್ಲಿ ಮೀಸಲಾತಿಗೆ ಒತ್ತಾಯಿಸುವುದಕ್ಕಿಂತ ಹತ್ತು ಪಟ್ಟು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಮಾಡಬೇಕೆಂದು ಹೋರಾಟವನ್ನು ಹಮ್ಮಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.

ಸರಕಾರದ ಸೌಲಭ್ಯಗಳಿಲ್ಲದೆ ರಾಜ್ಯದಲ್ಲಿ ಇಲ್ಲವೇ ದೇಶದಲ್ಲಿ ಯಾವುದೇ ಖಾಸಗಿ ಕಂಪೆನಿಗಳು ಸ್ಥಾಪನೆಯಾಗುವುದಿಲ್ಲ. ರಿಯಾಯಿತಿ ದರದಲ್ಲಿ ಜಮೀನು, ವಿದ್ಯುತ್, ನೀರು, ರಸ್ತೆ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸರಕಾರದಿಂದ ಪಡೆಯುತ್ತವೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿ ಮಾಡಲು ಅನುಕೂಲವಾಗುವಂತೆ ಕಾನೂನು ರೂಪಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಾಹಿತಿ ಸಿದ್ಧಲಿಂಗಯ್ಯ, ಸಮತಾ ಸೈನಿಕ ದಳದ ವೆಂಕಟಸ್ವಾಮಿ, ಹಿರಿಯ ಅಧಿಕಾರಿಗಳಾದ ಗೋನಾಳ ಭೀಮಪ್ಪ, ಸುಭಾಷ್ ಭರಣಿ, ಶಿವಾಜಿ ಗಣೇಶನ್, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು, ಅಧಿಕಾರಿಗಗಳು ಭಾಗವಹಿಸಿದ್ದರು.

ಇವತ್ತು ಪರಿಶಿಷ್ಟ ಜಾತಿ ಒಳಗೊಂಡಂತೆ ಎಸ್ಟಿ, ಹಿಂದುಳಿದ ವರ್ಗ ಹಾಗೂ ಮೇಲ್ವರ್ಗದ ಬಡವರು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ. ಆದರೆ, ಇವತ್ತಿಗೂ ಮೀಸಲಾತಿಯೆಂದರೆ ಕೇವಲ ಪರಿಶಿಷ್ಟ ಜಾತಿ ಸಮುದಾಯವನ್ನು ಮಾತ್ರ ತೋರಿಸಿ, ಹೀಯಾಳಿಸುವಂತಹ ಪ್ರವೃತ್ತಿ ಹಿಂದಿನಿಂದಲೂ ಬಂದಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವಿದೆ.
-ಸಿದ್ದಯ್ಯ, ನಿವೃತ್ತ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News