ನನ್ನ ತಂದೆಗೆ ಮೋಸ ಮಾಡಿದ್ದು ಸಿದ್ದರಾಮಯ್ಯ: ಶಾಸಕಿ ಪೂರ್ಣಿಮಾ ಆಕ್ರೋಶ

Update: 2019-11-20 13:54 GMT

ಬೆಂಗಳೂರು, ನ.20: ನನ್ನ ತಂದೆ ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಬೇಡ. ಅವರಿಗೆ ಮೋಸ ಮಾಡಿದ್ದೇ ಸಿದ್ದರಾಮಯ್ಯ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಕ್ರೊಶ ವ್ಯಕ್ತಪಡಿಸಿದರು.

ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ನಾನು ಭೈರತಿ ಬಸವರಾಜ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಬುಧವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಪರವಾಗಿ ಮೇಡಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ನಮ್ಮ ತಂದೆಯನ್ನು ತುಳಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಬಾರದೆಂದು ನಮ್ಮ ತಂದೆಗೆ 2013ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದರು ಎಂದು ಪೂರ್ಣಿಮಾ ಶ್ರೀನಿವಾಸ್ ಕಿಡಿಗಾರಿದರು.

ಎ.ಕೃಷ್ಣಪ್ಪ ಬಗ್ಗೆ ಸಿದ್ದರಾಮಯ್ಯಗೆ ಕಾಳಜಿ ಇದ್ದಿದ್ದರೆ, ಅವತ್ತು ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದ ಭೈರತಿ ಬಸವರಾಜ್‌ಗೆ ಬುದ್ಧಿ ಹೇಳಬಹುದಿತ್ತು. ನೀವು ಹಾಕಿದ ಗೆರೆಯನ್ನು ಬಸವರಾಜ್ ದಾಟುತ್ತಿರಲಿಲ್ಲ. ಬಸವರಾಜ್ ನನ್ನ ತಂದೆಯ ಶಿಷ್ಯ. ಆದರೆ, ನನ್ನ ತಂದೆಯನ್ನು ತುಳಿಯಲು ಅವರ ಶಿಷ್ಯನನ್ನೆ ದಾಳವಾಗಿ ಬಳಸಿಕೊಂಡ್ರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೃಷ್ಣಪ್ಪ ಮೇಲೆ ಅಭಿಮಾನ ಇದ್ದಿದ್ದರೆ ನನನ್ನು ಯಾಕೆ ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಿಸಿದ್ರಿ? ಇವತ್ತು ಭೈರತಿ ಬಸವರಾಜ್ ಬಿಜೆಪಿಗೆ ಬಂದಿರುವುದರಿಂದ ಅವರ ಮೇಲೆ ಯಾಕೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದೀರಾ ಎಂದು ಅವರು ಹೇಳಿದರು.

ಬಿಜೆಪಿ ಪಕ್ಷ ನನ್ನನ್ನು ಶಾಸಕಿಯನ್ನಾಗಿ ಮಾಡಿದೆ. ಕೃಷ್ಣಪ್ಪ ಮಗಳು ಎಂಬ ಕಾರಣಕ್ಕೆ ಈ ಕ್ಷೇತ್ರದ ಜನ ನನ್ನ ಜೊತೆ ಸದಾ ಇರುತ್ತಾರೆ. ಬಸವರಾಜ್ ಅವರನ್ನು ನಾವು ಒಪ್ಪಿಕೊಂಡಿದ್ದೇವೆ. ಈ ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುತ್ತೇವೆ. ಆದರೆ, ಕಾಂಗ್ರೆಸ್‌ನವರು ಮಾತ್ರ ನನ್ನ ತಂದೆಯ ಹೆಸರನ್ನು ಬಳಸಿಕೊಳ್ಳುವುದು ಬೇಡ ಎಂದು ಪೂರ್ಣಿಮಾ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಮಾತನಾಡಿ, ಯಾರೇ ಮುಖ್ಯಮಂತ್ರಿಯಾಗಿರಲಿ, ರಾಜ್ಯದ 224 ಕ್ಷೇತ್ರಗಳಿಗೆ ಅನುದಾನ ನೀಡುವಂತೆ ನನ್ನ ಕ್ಷೇತ್ರಕ್ಕೂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಅನುದಾನ ನೀಡಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆ ಅನುದಾನ ಪಡೆಯಲು ಪ್ರಬಲವಾಗಿ ಒತ್ತಾಯಿಸಿದ್ದರಿಂದ ಹೆಚ್ಚಿನ ಅನುದಾನ ಬಂದಿದೆ. ಈ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ, ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರಿಗೆ ಈಗಾಗಲೇ ಸೋಲಿನ ಸೂಚನೆ ಸಿಕ್ಕಿದೆ. ಮತದಾನದ ದಿನ ಮತಗಟ್ಟೆಗಳ ಬಳಿ ಟೇಬಲ್ ಹಾಕಲು ಅವರಿಗೆ ಜನ ಸಿಗದೆ ಇರುವಂತಹ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಟಿಕೆಟ್ ಬಿಟ್ಟು ಕೊಟ್ಟಿದ್ದರಿಂದ ನಾನು ಯಾವುದೇ ತ್ಯಾಗ ಮಾಡಿ ಕರ್ಣ ಆಗಿಲ್ಲ. ಪಕ್ಷ ನನಗೆ ತಾಯಿ ಇದ್ದಂತೆ, ಅದು ಹೇಳಿದ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಹಾಗೂ ಭೈರತಿ ಬಸವರಾಜ್ ಎಲ್ಲ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸೇರಿದಂತೆ ಯಾರೇ ಬಂದು ಇಲ್ಲಿ ಪ್ರಚಾರ ಮಾಡಿದರೂ ಜನ ಬಿಜೆಪಿ ಕೈ ಹಿಡಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News