ಬೆಂಗಳೂರು: ಡ್ರಗ್ಸ್ ಚಟಕ್ಕೆ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು

Update: 2019-11-20 13:36 GMT

ಬೆಂಗಳೂರು, ನ.20: ಕೆಲ ಕ್ಷಣಗಳ ನಶೆಯ ಚಟಕ್ಕೆ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಇಲ್ಲಿನ ಮಲ್ಲೇಶ್ವರಂನ ಕೋದಂಡರಾಮ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೋದಂಡರಾಮ ನಗರದ ಅಭಿಲಾಷ್(23), ಗೋಪಿ(30) ಮೃತ ಯುವಕರು ಎಂದು ತಿಳಿದುಬಂದಿದೆ.

ಪ್ರಕರಣದ ವಿವರ: ನ.18ರ ರಾತ್ರಿ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಯುವತಿಯರಿಬ್ಬರು ಸೇರಿ ಒಟ್ಟು 10ಕ್ಕೂ ಅಧಿಕ ಮಂದಿ ಮಲ್ಲೇಶ್ವರಂನ ಫ್ಲೈವರ್ ಮಾರ್ಕೆಟ್ ಬಳಿಯ ಬಿಬಿಎಂಪಿ ಮೈದಾನದಲ್ಲಿ ಜಮಾಯಿಸಿ ಟೈಡಾಲ್ ಎಂಬ ಮಾತ್ರೆಯನ್ನು ಪುಡಿ ಮಾಡಿ ಇಂಜೆಕ್ಷನ್ ಮೂಲಕ ದೇಹಕ್ಕೆ ಸೇರಿಸಿದ್ದಾರೆ ಎನ್ನಲಾಗಿದೆ.

ಇದರ ಪರಿಣಾಮ ಓವರ್ ಡೋಸ್ ಆಗಿದ್ದು, ಎಲ್ಲರಿಗೂ ತೀವ್ರ ಜ್ವರ, ತಲೆ ಸುತ್ತು ಹಾಗೂ ಹೊಟ್ಟೆ ನೋವು ಶುರುವಾಗಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ, ಅಭಿಲಾಷ್ ಹಾಗೂ ಗೋಪಿ ಮೃತಪಟ್ಟರೆ, ಮತ್ತೊಬ್ಬ ಸುಮನ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಹೇಳುವುದೇನು?: ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮಾಹಿತಿಯಂತೆ ಟೈಡಾಲ್ ಎಂಬ ಮಾತ್ರೆಯನ್ನು ತೆಗೆದುಕೊಂಡು ಅಸ್ವಸ್ಥರಾಗಿದ್ದಾರೆ. ಅಲ್ಲದೆ, ಈ ಮಾತ್ರೆಯನ್ನು ವೈದ್ಯರ ಅನುಮತಿ ಇಲ್ಲದೆ ನೀಡುವಂತಿಲ್ಲ. ಎಲ್ಲಿಂದ ಮಾತ್ರೆ ಖರೀದಿಸಿದ್ದಾರೆ ಎನ್ನುವುದು ಮುಖ್ಯವಾಗಿದ್ದು, ಇದನ್ನು ನೇರವಾಗಿ ಸಿರಿಂಜ್ ಮೂಲಕ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದರು.

ಕಠಿಣ ಕ್ರಮಕ್ಕೆ ಆಯುಕ್ತರ ಸೂಚನೆ
ಡ್ರಗ್ಸ್ ಚಟಕ್ಕೆ ಯುವಕರಿಬ್ಬರು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದರು.
ಮಾದಕ ವಸ್ತು ಮಾರಾಟಗಾರರು ಯುವಕರನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದು, ಅವರ ಮೇಲೆ ತೀವ್ರ ನಿಗಾವನ್ನಿಟ್ಟು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News