ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ಆಟಗಾರರ ಮೇಲೆ ಹನಿಟ್ರ್ಯಾಪ್ ಅಸ್ತ್ರ?

Update: 2019-11-20 15:02 GMT

ಬೆಂಗಳೂರು, ನ.20: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಬೆಟ್ಟಿಂಗ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ಕೆಲವರು ಹನಿಟ್ರ್ಯಾಪ್ ಮೂಲಕ ಆಟಗಾರರ ಮೇಲೆ ಹಿಡಿತ ಸಾಧಿಸಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಆಟಗಾರರಿಗೆ ಹಣದ ಜತೆಗೆ, ಯುವತಿಯರ ಸಂಗ ಬೆಳೆಸುವಂತೆ ಹೇಳುತ್ತಿದ್ದ ಕೆಲ ಆರೋಪಿಗಳು, ಬಳಿಕ ಅವರ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದು, ಪಂದ್ಯದ ವೇಳೆ ಬೆದರಿಕೆ ಹಾಕಿ, ಹಿಡಿತ ಸಾಧಿಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕೆಪಿಎಲ್ ಆಟಗಾರರನ್ನು ಚಿಯರ್ ಗರ್ಲ್ಸ್ ಅಲ್ಲದೆ, ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್‌ಗೆ ಬೀಳಿಸಿ ನಂತರ ಅವರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಒತ್ತಡ ಹೇರಲಾಗುತ್ತಿದ್ದ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ ಎಂದರು.

ಈಗಾಗಲೇ ಬೆಟ್ಟಿಂಗ್ ಪ್ರಕರಣ ಸಂಬಂಧ 7 ಮಂದಿ ಆಟಗಾರರನ್ನು ಬಂಧಿಸಲಾಗಿದೆ. ವಿಚಾರವಣೆ ವೇಳೆ ಹನಿಟ್ರ್ಯಾಪ್‌ನಿಂದ ಮ್ಯಾಚ್ ಫಿಕ್ಸಿಂಗ್‌ಗೆ ಬಲವಂತವಾಗಿ ಒಪ್ಪಿಕೊಳ್ಳಬೇಕಾಗಿದ್ದು, ಬೇರೆ ಮಾರ್ಗ ಇಲ್ಲ ಎಂಬುದು ಬಂಧಿತ ಆಟಗಾರರು ಮಾಹಿತಿ ನೀಡಿದ್ದಾರೆಂದು ಅವರು ಹೇಳಿದರು.

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ದಂಧೆ ದೊಡ್ಡದಾಗಿ ಬೆಳೆದಿದ್ದು, ಆಟಗಾರರನ್ನು ಹನಿಟ್ರ್ಯಾಪ್ ಮೂಲಕ ಫಿಕ್ಸಿಂಗ್‌ಗೆ ಕರೆತರಲಾಗುತ್ತಿದೆ. ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಫಿಕ್ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News