ಟೆಕ್ ಸಮ್ಮಿಟ್‌ಗೆ ಅದ್ದೂರಿ ತೆರೆ

Update: 2019-11-20 15:47 GMT

ಬೆಂಗಳೂರು, ನ.20: ನಗರದ ಅರಮನೆ ಆವರಣದಲ್ಲಿ ನಡೆದ 22ನೆ ಬೆಂಗಳೂರು ಟೆಕ್ ಸಮ್ಮಿಟ್‌ಗೆ ಬುಧವಾರ ಅದ್ದೂರಿ ತೆರೆಬಿದ್ದಿದೆ.
ಮೂರು ದಿನಗಳ ಸಮಿಟ್‌ನಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದು, ದೇಶ-ವಿದೇಶಗಳಿಂದ 3 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ 350ಕ್ಕೂ ಹೆಚ್ಚು ತಜ್ಞರು ಇದರಲ್ಲಿ ಭಾಗವಹಿಸಿದ್ದರು. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಇದು ವೇದಿಕೆಯಾಯಿತು. ಅಷ್ಟೇ ಅಲ್ಲ, ಹೊಸ ಆಲೋಚನೆಗಳ ವಿನಿಮಯ, ಸ್ಟಾರ್ಟ್‌ಅಪ್‌ಗಳಿಗೆ ಈ ಮೇಳ ಸಾಕ್ಷಿಯಾಗಿದೆ.

ಕೊನೇ ದಿನವಾದ ಬುಧವಾರ ದೊಡ್ಡ ಸಂಖ್ಯೆಯಲ್ಲೇ ವಿದ್ಯಾರ್ಥಿಗಳು ಮತ್ತು ತಂತ್ರಜ್ಞರು ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಹೊಸ ಆವಿಷ್ಕಾರಗಳನ್ನು ವೀಕ್ಷಿಸಿದರು. ದಿನನಿತ್ಯದ ಬದುಕಿಗೆ ಉಪಯೋಗವಾಗುವ ಆವಿಷ್ಕಾರಗಳು ಈ ವಸ್ತು ಪ್ರದರ್ಶನದಲ್ಲಿ ಹೆಚ್ಚಾಗಿದ್ದು, ಜನರ ಗಮನ ಸೆಳೆದವು.

ಶಾಲಾ ಮಕ್ಕಳ ಕುತೂಹಲ ತಣಿಸುವ ರೊಬೊಟೆಕ್ ಸಾಧನಗಳು, ರೈತರಿಗೆ ವರವಾಗುವ ತಂತ್ರಜ್ಞಾನಗಳು, ರೋಗಿಗಳ ಚಿಕಿತ್ಸೆಗೆ ಬಳಸಲು ಹೊಸ ಸಾಧನಗಳು, ಹೀಗೆ ತಂತ್ರಜ್ಞ್ಞಾನ ಕ್ಷೇತ್ರದ ಹಲವು ಆಯಾಮಗಳನ್ನು ಈ ಟೆಕ್ ಸಮ್ಮೇಳನ ಜನಸಾಮಾನ್ಯರಿಗೆ ಪರಿಚಿಸುವಲ್ಲಿ ಯಶಸ್ವಿಯಾಗಿದೆ.

ಈ ಟೆಕ್ ಸಮ್ಮೇಳನದಲ್ಲಿ ನೂತನ ಆವಿಷ್ಕಾರಗಳ ಜತೆಗೆ ವಿವಿಧ ಉದ್ಯಮಿಗಳ ನಡುವೆ ಚರ್ಚೆ, ತಂತ್ರಜ್ಞಾನದ ಬಗ್ಗೆ ವಿಚಾರ ಸಂಕಿರಣಗಳು, ಉದ್ಯಮಿಗಳ ನಡುವೆ ತಂತ್ರಜ್ಞ್ಞಾನ ವಿನಿಮಯದ ಒಪ್ಪಂದಗಳು ನಡೆದವು.

ದೇಶ-ವಿದೇಶದ ನೂರಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ, ಬಯೋತಂತ್ರಜ್ಞಾನ, ನವೋದ್ಯಮ ಕಂಪೆನಿಗಳು ಈ ಟೆಕ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರಿನಲ್ಲಿ ನಡೆದಿರುವ 22ನೆ ಟೆಕ್ ಸಮ್ಮಿಟ್ ಇದಾಗಿದ್ದು, ಮುಂದಿನ ಬಾರಿಗೆ ಹೊಸ ಆವಿಷ್ಕಾರದೊಂದಿಗೆ ಮತ್ತೆ ಒಗ್ಗೂಡುವ ಘೋಷಣೆಯೊಂದಿಗೆ ಅಧಿಕೃತ ತೆರೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News