ಬೆಂಗಳೂರು: ಕೆ.ಸಿ.ಡಿ.ಸಿ ಸಂಸ್ಕರಣಾ ಘಟಕ ಪರಿಶೀಲನೆ; ಸಮರ್ಪಕ ನಿರ್ವಹಣೆಗೆ ಮೇಯರ್ ಸೂಚನೆ

Update: 2019-11-20 16:00 GMT

ಬೆಂಗಳೂರು, ನ.20: ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ (ಓಇಈಇ) ಸಂಸ್ಕರಣಾ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಹಾಗೂ ಹಳೆಯ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳನ್ನು ಅಳವಡಿಸುವಂತೆ ಮೇಯರ್ ಗೌತಮ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿಯ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ (ಓಇಈಇ) ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವರು ಅಧಿಕಾರಿಗಳಿಗೆ ಹಲವಾರು ಸೂಚನೆ ನೀಡಿದರು.

ಘಟಕದಲ್ಲಿ ಉತ್ಪತ್ತಿ ಮಾಡುತ್ತಿರುವ ಗೊಬ್ಬರವನ್ನು ಯಾರಿಗೆ ಮಾರಾಟ ಮಾಡುತ್ತಿದ್ದೀರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಯೊಬ್ಬರು ಸಂಸ್ಕರಣೆ ಮಾಡಿದ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಕಳೆದ ವರ್ಷ 2018-19 ರಲ್ಲಿ 40.23 ಲಕ್ಷಕ್ಕೆ ಮಾರಾಟ ಮಾಡಿದ್ದು, 2019-20 ರಲ್ಲಿ 34.29 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಸಂಸ್ಕರಣಾ ಘಟಕಗಳಲ್ಲಿನ ಗೊಬ್ಬರವನ್ನು ಕೃಷಿ ಇಲಾಖೆ ಖರೀದಿ ಮಾಡಿಕೊಳ್ಳುವಂತೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ತ್ಯಾಜ್ಯದಿಂದ ಉತ್ಪತ್ತಿ ಆಗುವ ಲಿಚೆಟ್ ಸಂಗ್ರಹವಾಗುವ ಸ್ಥಳಕ್ಕೆ ಭೇಟಿ ನೀಡಿ ಐದು ಟನ್ ಸಾಮರ್ಥ್ಯದ ಹಳೆಯ ಬಯೋ ಮಿತನೈಸೇಷನ್ ಘಟಕವನ್ನು ಪರಿಶೀಲಿಸಿ ಅದನ್ನು ಮರು ಚಾಲನೆ ಮಾಡುವಂತೆ ಸೂಚನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆ ವ್ಯಾಪ್ತಿಯಲಿ ಕಸದ ಸಮಸ್ಯೆ ನಿವಾರಣೆ ಮಾಡಿ ಕಸಮುಕ್ತ ಬೆಂಗಳೂರನ್ನಾಗಿ ಮಾಡಲು ಪಾಲಿಕೆ ಸೂಕ್ತ ಕ್ರಮ ವಹಿಸುತ್ತಿದೆ. ಕಸ ವಿಲೇವಾರಿ ಸಂಬಂಧ ಕಳೆದ ವಾರ ಇಂದೋರ್ ನಗರಕ್ಕೆ ಪ್ರವಾಸ ಮಾಡಿ ಅಲ್ಲಿ ಕಸ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ಇಲ್ಲಿಯೂ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

ಘಟಕಕ್ಕೆ 60 ಕೋಟಿ ರೂ. ವ್ಯಯ: ಕೆ.ಸಿ.ಡಿ.ಸಿ ಘಟಕವನ್ನು 1975ರಲ್ಲಿ 30 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆಯೇ ಘಟಕವನ್ನು ನಿರ್ವಹಣೆ ಮಾಡುತ್ತಿದ್ದು, ಘಟಕಕ್ಕೆ ಇದುವರೆಗೆ 60 ಕೋಟಿ ರೂ. ವ್ಯಯವಾಗಿದೆ. ಈ ಘಟಕದಲ್ಲಿ 500 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯವಿದ್ದು, ಪ್ರತಿನಿತ್ಯ 80 ರಿಂದ 100 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಮೇಯರ್ ಮಾಹಿತಿ ನೀಡಿದರು.

ತ್ಯಾಜ್ಯದಲ್ಲಿ ಸಂಗ್ರಹವಾದ ಪ್ಲಾಸ್ಟಿಕನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಘಟಕದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಪಾಲಿಕೆಯ ಜತೆ ನಾಗರಿಕರು ಹಾಗೂ ಅಧಿಕಾರಿಗಳು ಕೈಜೋಡಿಸಿದರೆ ಬಹುಬೇಗ ಸಮಸ್ಯೆ ನಿವಾರಣೆ ಮಾಡಬಹುದಾಗಿದೆ ಎಂದರು.

ಈ ಸಂದರ್ಭಧಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಸದಸ್ಯೆ ನೇತ್ರಾ ನಾರಾಯಣ್, ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ರಾಮಕೃಷ್ಣ, ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್ ಖಾನ್, ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್ ವಿಶ್ವನಾಥ್ ಮತ್ತು ಇತರೆ ಪಾಲಿಕೆ ಅಧಿಕಾರಿಗಳಿದ್ದರು.

ಕಸದ ಸಮಸ್ಯೆ ನಿವಾರಣೆಗಾಗಿ ಇಂದೋರ್‌ನಿಂದ ಕಸ ವಿಲೇವಾರಿ ಮಾಡುವ ಪ್ರಕ್ರಿಯೆ ಬಗ್ಗೆ ತಿಳಿಸಲು ವಿಶೇಷ ತಜ್ಞರ ತಂಡ ಇದೇ ನ.25 ರಂದು ನಗರಕ್ಕೆ ಬರುತ್ತಿದ್ದಾರೆ. ಈ ವೇಳೆ ಪಾಲಿಕೆ ಅಧಿಕಾರಿಗಳು ಅವರ ಜೊತೆ ಕೈಜೋಡಿಸಿ ಕಸದ ಸಮಸ್ಯೆ ನಿವಾರಣೆ ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.
-ಗೌತಮ್ ಕುಮಾರ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News