ಸೆಕ್ಷನ್ 138ರ ಅಡಿಯಲ್ಲಿ ಅಕ್ರಮ ಜಾಹೀರಾತು ತೆರವಿಗೆ ಆದೇಶ: ಹೈಕೋರ್ಟ್

Update: 2019-11-20 16:02 GMT

ಬೆಂಗಳೂರು, ನ.12: ಕೆಎಂಸಿ ಕಾಯಿದೆ ಸೆಕ್ಷನ್ 138 ಪ್ರಕಾರ ಬಿಬಿಎಂಪಿ ಸಲ್ಲಿಸಿರುವ ಪ್ರಮಾಣ ಪತ್ರದಂತೆ 1,806 ಅನಧಿಕೃತ ಜಾಹೀರಾತು ಫಲಕಗಳನ್ನು ತೆರೆವುಗೊಳಿಸಬೇಕಾಗುತ್ತದೆ ಎಂದಿರುವ ಹೈಕೋರ್ಟ್ ಈ ಕುರಿತು ನ.21ರಂದು ನಿರ್ದೇಶನ ನೀಡುವುದಾಗಿ ತಿಳಿಸಿದೆ.

ಈ ಕುರಿತು ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿ ಸಲ್ಲಿಸುವ ಎಲ್ಲ ಪ್ರಮಾಣ ಪತ್ರಗಳನ್ನು ನ್ಯಾಯಪೀಠವು ದಿಢೀರ್ ಎಂದು ನಂಬುವುದಿಲ್ಲ. ಬಿಬಿಎಂಪಿ ಕೂಡ ನ್ಯಾಯಪೀಠಕ್ಕೆ ಸತ್ಯಸಂದೇಶವುಳ್ಳ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಬಿಬಿಎಂಪಿ ಪರ ವಕೀಲರಿಗೆ ತಿಳಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ರವಿ ವರ್ಮಕುಮಾರ್ ಅವರು, ಜಾಹೀರಾತು ಕಂಪೆನಿಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಫಲಕಗಳ ತೆರವಿಗೆ ಆದೇಶಿಸಿದರೆ ಉದ್ಯೋಗಕ್ಕೆ ತೊಂದರೆಯಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸೆಕ್ಷನ್ 138ರ ಪ್ರಕಾರ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲೆಬೇಕಾಗುತ್ತದೆ ಎಂದು ತಿಳಿಸಿತು.

ನ್ಯಾಯಪೀಠವು ವಿಧಾನಸೌಧದ ಮುಂದೆ ಜಾಹೀರಾತು ಫಲಕ ಹಾಕಲು ಬಿಬಿಎಂಪಿ ಏನಾದರೂ ಅವಕಾಶ ಕಲ್ಪಿಸಿತ್ತಾ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರಿ ಪರ ವಕೀಲ ಪಿ.ಬಿ.ಅಚ್ಚಪ್ಪ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 1,806 ಅನಧಿಕೃತ ಜಾಹೀರಾತು ಫಲಕಗಳು ಮಾತ್ರ ಬಾಕಿ ಉಳಿದಿವೆ. ಅಲ್ಲದೆ, ವಿಧಾನಸೌಧದ ಮುಂದೆ ಹಾಕಿದ್ದ ಜಾಹೀರಾತು ಫಲಕಕ್ಕೆ ಬಿಬಿಎಂಪಿ ಅವಕಾಶ ನೀಡಿರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News