ನೋಟು ರದ್ದತಿಯನ್ನು ಚುನಾವಣಾ ಬಾಂಡ್ ವಿಫಲಗೊಳಿಸಲಿದೆ ಎಂದು ಜೇಟ್ಲಿಗೆ ಎಚ್ಚರಿಸಿದ್ದ ಊರ್ಜಿತ್ ಪಟೇಲ್

Update: 2019-11-20 18:08 GMT

ಹೊಸದಿಲ್ಲಿ, ನ.20: ಚುನಾವಣಾ ಬಾಂಡ್‌ನಂತಹ ಯೋಜನೆಗಳು ಸಾಕಷ್ಟು ಅಪಾಯದಿಂದ ಕೂಡಿದ್ದು, ನೋಟು ರದ್ದತಿ(ಅನಾಣ್ಯೀಕರಣ)ಯ ಯಶಸ್ಸನ್ನು ವ್ಯರ್ಥವಾಗಿಸಲಿದೆ ಎಂದು 2017ರ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅಂದಿನ ವಿತ್ತಸಚಿವ ಅರುಣ್ ಜೇಟ್ಲಿಯವರಿಗೆ ಪತ್ರ ಬರೆದಿದ್ದರು ಎಂದು ವರದಿಯಾಗಿದೆ.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಆರ್‌ಟಿಐ ಕಾಯ್ದೆಯಡಿ ಪಡೆದ ಮಾಹಿತಿಯಿಂದ ಈ ವಿಷಯ ತಿಳಿದು ಬಂದಿದೆ. ಅನುಸೂಚಿತ ಬ್ಯಾಂಕ್‌ಗಳು ಕರೆನ್ಸಿಯ ರೀತಿಯ ಬಾಂಡ್‌ಗಳನ್ನು ಜಾರಿಗೊಳಿಸಲು ಅವಕಾಶ ನೀಡಿದರೆ ರಿಸರ್ವ್ ಬ್ಯಾಂಕ್‌ನ ವಿಶೇಷ ಅಧಿಕಾರವನ್ನು ರದ್ದು ಮಾಡಿದಂತಾಗುತ್ತದೆ . ಇಂತಹ ಕ್ರಮಗಳು ಈ ಯೋಜನೆಗಳ ಕುರಿತ ಸಾರ್ವಜನಿಕ ಗ್ರಹಿಕೆಯ ಮೇಲಷ್ಟೇ ಅಲ್ಲ, ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಆರ್‌ಬಿಐಯ ವಿಶ್ವಾಸಾರ್ಹತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ . ಚುನಾವಣಾ ಬಾಂಡ್‌ಗಳನ್ನು ನಕಲಿ ಸಂಸ್ಥೆಗಳ ಮೂಲಕ ದುರ್ಬಳಕೆ ಮಾಡಿಕೊಳ್ಳಬಹುದು. ಇದರಿಂದ ಅಕ್ರಮ ಹಣ ವರ್ಗಾವಣೆ ವ್ಯವಹಾರಕ್ಕೆ ಸುಲಭ ದಾರಿ ಮಾಡಿಕೊಟ್ಟಂತೆ ಆಗಬಹುದು ಎಂದು ಪಟೇಲ್ ಪತ್ರದಲ್ಲಿ ಹೇಳಿದ್ದರು ಎಂದು ವರದಿ ತಿಳಿಸಿದೆ.

   ಚುನಾವಣಾ ಬಾಂಡ್‌ ಗಳು ಡಿಜಿಟಲ್ ರೂಪದಲ್ಲಿರಬೇಕು. ಆಗ ಚುನಾವಣಾ ಬಾಂಡ್‌ಗಳನ್ನು ಅಕ್ರಮ ಹಣ ವರ್ಗಾವಣೆ ಪ್ರಕ್ರಿಯೆಗೆ ಬಳಸುವುದು ತಪ್ಪುತ್ತದೆ ಎಂದು ಪಟೇಲ್ ತಿಳಿಸಿದ್ದರು. ಈ ಪತ್ರಕ್ಕೆ ಜೇಟ್ಲಿಯಿಂದ ಉತ್ತರ ಬಂದಿರಲಿಲ್ಲ. ಆದರೆ ವಿತ್ತ ಇಲಾಖೆಯ ಆಗಿನ ಕಾರ್ಯದರ್ಶಿ ಸುಭಾಷ್ ಗರ್ಗ್ ಬರೆದಿದ್ದ ಪತ್ರದಲ್ಲಿ ಡಿಜಿಟಲ್ ರೂಪದ ಚುನಾವಣಾ ಬಾಂಡ್ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ದೇಣಿಗೆ ನೀಡುವವರ ಗುರುತನ್ನು ರಾಜಕೀಯ ಪಕ್ಷಗಳಿಂದ ಮುಚ್ಚಿಡಬೇಕು ಎಂಬ ಚುನಾವಣಾ ಬಾಂಡ್ ವ್ಯವಸ್ಥೆಯ ಮುಖ್ಯ ವೈಶಿಷ್ಟಕ್ಕೆ ಈ ಪ್ರಸ್ತಾವ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಅಭಿಪ್ರಾಯ ಪಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News