ವಿಪತ್ತು ನಿರ್ವಹಣಾ ನೀತಿ: ಶೀಘ್ರ ಅಂತಿಮಗೊಳಿಸಲು ಮುಖ್ಯಮಂತ್ರಿ ಸೂಚನೆ

Update: 2019-11-20 17:59 GMT

ಬೆಂಗಳೂರು, ನ. 20: ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿ ಮಾದರಿಯಲ್ಲೆ ರಾಜ್ಯದಲ್ಲಿಯೂ ವಿಪತ್ತು ನಿರ್ವಹಣಾ ನೀತಿ ಕರಡು ಸಿದ್ಧವಿದ್ದು, ಶೀಘ್ರವೇ ಅಂತಿಮಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಯಡಿಯೂರಪ್ಪ ತಮ್ಮ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದ ಅವರು, ಇನ್ನು 8 ವಾರದೊಳಗೆ ಕರಡು ನೀತಿ ಅಂತಿಮಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಪ್ರತಿ ಇಲಾಖೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಬೇಕು. ವಿಪತ್ತು ನಿರ್ವಹಣೆಗೆ ಎಸ್‌ಡಿಆರ್‌ಎಫ್‌ಗೆ 14ನೆ ಹಣಕಾಸು ಆಯೋಗದಡಿ 1,527 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು ಶೇ.75ರಷ್ಟು ಹಾಗೂ ರಾಜ್ಯದ ಪಾಲು ಶೇ.25ರಷ್ಟು ಇದೆ. ಆದರೆ ರಾಜ್ಯ ಸರಕಾರ ತುರ್ತು ಸಂದರ್ಭಗಳಲ್ಲಿ ಇನ್ನೂ ಹೆಚ್ಚಿನ ಮೊತ್ತ ಬಿಡುಗಡೆ ಮಾಡಿದೆ ಎಂದರು.

ರಾಜ್ಯದ ಎಲ್ಲ ವಿಭಾಗಗಳಲ್ಲಿ ತಲಾ 50 ಜನರ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳ ನಿಯೋಜನೆಗೆ ಕ್ರಮ ವಹಿಸಲಾಗಿದೆ. ಅಂತೆಯೇ ಎಸ್‌ಡಿಆರ್‌ಎಫ್ ಅಡಿ ರಕ್ಷಣಾ ಉಪಕರಣಗಳ ಖರೀದಿಗೆ 20ಕೋಟಿ ರೂ.ಒದಗಿಸಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವಿವರಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಸಂತ್ರಸ್ತರಿಗೆ ಪರಿಹಾರ ವಿತರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅರ್ಹ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ನಿಬಂಧನೆಗಳನ್ನು ಸರಳೀಕರಣಗೊಳಿಸುವಂತೆ ಸೂಚಿಸಿದರು. ಮನೆ ಕಳೆದುಕೊಂಡವರಿಗೆ ಮೊದಲ ಕಂತಿನ 1ಲಕ್ಷ ರೂ.ಪರಿಹಾರ ವಿತರಣೆ ಮಾಡಿದ ಕುರಿತು ಫಲಾನುಭವಿಗಳಿಗೆ ಪತ್ರ ಬರೆದು ಮಾಹಿತಿ ನೀಡಿ, ಮನೆ ನಿರ್ಮಿಸುವಂತೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News