ಪ್ರತಿಭಟನಾನಿರತ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಕೆವಿಎಸ್ ಖಂಡನೆ

Update: 2019-11-20 18:02 GMT

ಬೆಂಗಳೂರು, ನ.20: ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಹೋರಾಟ ಮಾಡುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದು ಸರಿಯಲ್ಲವೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ(ಕೆವಿಎಸ್) ಖಂಡಿಸಿದೆ.

ಕೇಂದ್ರ ಸರಕಾರ ಏಕಾಏಕಿ ಜೆಎನ್‌ಯುನ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸಿದೆ. ಇದರಿಂದ ಆತಂಕಕ್ಕೆ ಒಳಗಾಗಿ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದ ಕ್ರಮವನ್ನು ಹಿಂಪಡೆಯುವಂತೆ ಕಾಲೇಜಿನ ಆವರಣದಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ನ್ಯಾಯಬದ್ಧವಾದ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ನಡೆಸಿ ಗಂಭೀರ ಹಲ್ಲೆಯಲ್ಲಿ ತೊಡಗಿದೆ.

ಕೇಂದ್ರ ಸರಕಾರದ ಹಿಡಿತದಲ್ಲಿರುವ ಪೊಲೀಸ್ ವ್ಯವಸ್ಥೆ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆಗಳನ್ನು ಮಾಡುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಹತ್ತಿಕ್ಕಲು ಯತ್ನಿಸುತ್ತಿವೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಬಹುಮುಖ್ಯವಾದ ಲಕ್ಷಣವಾಗಿದೆ. ಅದಕ್ಕೆ ಆಸ್ಪದಕೊಡದ ರೀತಿಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಗೂಂಡಾ ವರ್ತನೆಯೇ ಸರಿಯೆಂದು ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣವನ್ನು ಖಾಸಗೀಕರಣ ಮತ್ತು ವ್ಯಾಪಾರೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ಹೋರಾಟ ಮಾಡುತ್ತಿರುವುದು ನ್ಯಾಯೋಚಿತವಾಗಿದೆ. ಅವರ ಹೋರಾಟದ ಜೊತೆಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸದಾ ಜೊತೆಗಿರುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News