ಹರೇನ್ ಪಾಂಡ್ಯ ಕೊಲೆ ಪ್ರಕರಣ: ತೀರ್ಪು ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2019-11-21 15:46 GMT

ಹೊಸದಿಲ್ಲಿ, ನ.21: ಮಾಜಿ ಗುಜರಾತ್ ಗೃಹಸಚಿವ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ 10 ಆರೋಪಿಗಳ ದೋಷ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿದೆ. ಜುಲೈ 5ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನೆ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ ಸರನ್ ಅವರ ಪೀಠವು ವಜಾಗೊಳಿಸಿದೆ.

ಬಿಜೆಪಿ ನಾಯಕ ಪಾಂಡ್ಯ ಅವರು 2003,ಮಾ 26ರಂದು ಬೆಳಿಗ್ಗೆ ಅಹ್ಮದಾಬಾದ್‌ನಲ್ಲಿ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದಾಗ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. 2002ರಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಕೋಮು ದಂಗೆಗಳ ಪ್ರತೀಕಾರಕ್ಕಾಗಿ ಪಾಂಡ್ಯ ಹತ್ಯೆ ನಡೆದಿತ್ತು ಎಂದು ಸಿಬಿಐ ಹೇಳಿತ್ತು.

ಪಾಂಡ್ಯ ಹತ್ಯೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2007ರಲ್ಲಿ 12 ಜನರನ್ನು ದೋಷಿಗಳು ಎಂದು ಘೋಷಿಸಿತ್ತು. 2011ರಲ್ಲಿ ಎಲ್ಲರನ್ನೂ ಕೊಲೆ ಆರೋಪದಿಂದ ಖುಲಾಸೆಗೊಳಿಸಿದ್ದ ಗುಜರಾತ್ ಉಚ್ಚ ನ್ಯಾಯಾಲಯವು ತನಿಖೆಯು ಸಮರ್ಪಕವಾಗಿಲ್ಲ ಮತ್ತು ಪ್ರಕರಣದ ದಿಕ್ಕನ್ನು ತಪ್ಪಿಸಿದೆ ಎಂದು ಹೇಳಿತ್ತು. ಆದರೆ ಕ್ರಿಮಿನಲ್ ಒಳಸಂಚು, ಕೊಲೆಗೆ ಯತ್ನ ಮತ್ತು ಭಯೋತ್ಪಾದನೆ ತಡೆ ಕಾಯ್ದೆಯಡಿ ಅಪರಾಧಗಳಿಗಾಗಿ ಅವರನ್ನು ದೋಷಿಗಳೆಂದು ಹೇಳಿದ್ದ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಅದು ಎತ್ತಿ ಹಿಡಿದಿತ್ತು.

ಜು.5ರಂದು ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದ್ದ ಸರ್ವೋಚ್ಚ ನ್ಯಾಯಾಲಯವು ಎಲ್ಲ 12 ಜನರನ್ನು ಕೊಲೆ ಆರೋಪದಲ್ಲಿ ತಪ್ಪಿತಸ್ಥರು ಎಂದು ಘೋಷಿಸಿತ್ತು. ಈ ಪೈಕಿ ಒಂಭತ್ತು ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದ ಅದು ಇತರ ಮೂವರಿಗೆ ವಿವಿಧ ಅವಧಿಗಳ ಜೈಲು ಶಿಕ್ಷೆ ವಿಧಿಸಿತ್ತು.

2005ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೋರ್ವ ಮಾಜಿ ಗುಜರಾತ್ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರಾ ಅವರು ಪಾಂಡ್ಯ ಹತ್ಯೆಗಾಗಿ ಸೊಹ್ರಾಬುದ್ದೀನ್‌ಗೆ ಸುಪಾರಿ ನೀಡಿದ್ದರು ಎಂದು ಕಳೆದ ವರ್ಷ ಮುಂಬೈನಲ್ಲಿಯ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News