27 ವರ್ಷದ ಯುವಕನಿಗೆ ಕರೆ ಮಾಡಿ 'ನನ್ನ ಜೊತೆ ಕೆಲಸ ಮಾಡು' ಎಂದ ರತನ್ ಟಾಟಾ

Update: 2019-11-21 10:07 GMT
PHOTO: facebook.com/humansofbombay

ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ 27 ವರ್ಷದ ಯುವಕ ಶಂತನು ನಾಯ್ಡು ಕೆಲಸ ಗಿಟ್ಟಿಸಿಕೊಂಡ ಕಥೆಯೊಂದು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಹ್ಯೂಮನ್ಸ್ ಆಫ್ ಬಾಂಬೆ ಫೇಸ್ ಬುಕ್ ಪೇಜ್ ಈ ಕಥೆಯನ್ನು ಪೋಸ್ಟ್ ಮಾಡಿದೆ.

ತಾನು ಮೊದಲು ರತನ್ ಟಾಟಾ ಅವರನ್ನು 2014ರಲ್ಲಿ ಭೇಟಿಯಾಗಿದ್ದಾಗಿ ಹಾಗೂ ಅದು ತನ್ನ ಜೀವನಕ್ಕೊಂದು ಅದ್ಭುತ ತಿರುವು ನೀಡಿತ್ತು ಎಂದು ಶಂತನು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಬೀದಿ ನಾಯಿಯೊಂದು  ರಸ್ತೆ ಅಪಘಾತದಲ್ಲಿ ಸತ್ತಿದ್ದನ್ನು ಕಣ್ಣಾರೆ ಕಂಡ ಶಂತನು ಅವರಿಗೆ  ಚಾಲಕರಿಗೆ ದೂರದಿಂದಲೂ ಬೀದಿ ನಾಯಿಗಳು ಕಾಣುವಂತಾಗಲು ಅವುಗಳ ಕೊರಳಿಗೆ ಹಾಕುವ ರಿಫ್ಲೆಕ್ಟರ್ ಹೊಂದಿದ ಕಾಲರುಗಳನ್ನು ತಯಾರಿಸುವ ಐಡಿಯಾ ಹೊಳೆದಿತ್ತು. ಈ ವಿಚಾರ ಎಲ್ಲೆಡೆ ಹರಡಿ ಟಾಟಾ ಗ್ರೂಪ್ ಆಫ್ ಕಂಪೆನೀಸ್ ನ್ಯೂಸ್ ಲೆಟರ್ ನಲ್ಲೂ ಅದು ಸ್ಥಾನ ಪಡೆಯಿತು ಎಂದು ಶಂತನು ವಿವರಿಸುತ್ತಾರೆ.

ರತನ್ ಟಾಟಾ ಆವರಿಗೂ ನಾಯಿಗಳೆಂದರೆ ಅಚ್ಚುಮೆಚ್ಚು ಆಗಿರುವುದರಿಂದ ಅವರಿಗೆ ಪತ್ರ ಬರೆಯುವಂತೆ  ತಂದೆಯ ಸಲಹೆ ಮೇರೆಗೆ ಶಂತನು ಪತ್ರ ಬರೆದಿದ್ದರು. ಎರಡು ತಿಂಗಳ ನಂತರ ರತನ್ ಟಾಟಾ  ಅವರ ಉತ್ತರ ಬಂದು ತನ್ನನ್ನು ಭೇಟಿಯಾಗಲು ಆಹ್ವಾನವಿತ್ತಿದ್ದರು.ಕೆಲ ದಿನಗಳ ನಂತರ ಶಂತನು ರತನ್ ಟಾಟಾ ಅವರನ್ನು ಅವರ ಮುಂಬೈ ಕಚೇರಿಯಲ್ಲಿ ಭೇಟಿಯಾದರು. ಶಂತನು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ ರತನ್ ಟಾಟಾ ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ನಾಯಿಗಳನ್ನು  ತೋರಿಸಿದರಲ್ಲದೆ ಶಂತನುವಿನ ರಿಫ್ಲೆಕ್ಟಿವ್  ಕಾಲರ್ ತಯಾರಿ ಉದ್ಯಮದಲ್ಲಿ  ಹೂಡಿಕೆಯನ್ನೂ ಮಾಡಿದರು.

ನಂತರ ಶಂತನು ತನ್ನ ಸ್ನಾತ್ತಕೋತ್ತರ ಶಿಕ್ಷಣ ಮುಗಿಸಲು ವಿದೇಶಕ್ಕೆ ತೆರಳಿದರೂ ಪದವಿ ಪಡೆದ ನಂತರ ಟಾಟಾ ಟ್ರಸ್ಟ್‍ ಗೆ ಕೆಲಸ ಮಾಡುವ ವಾಗ್ದಾನ ಮಾಡಿದರು. ಶಂತನು ಮರಳಿ ಭಾರತಕ್ಕ ಬಂದ ನಂತರ ಒಂದು ದಿನ ಅವರಿಗೆ   ರತನ್ ಟಾಟಾ ಕರೆ ಮಾಡಿ ತಮ್ಮ ಕಚೇರಿಯಲ್ಲಿ ಸಾಕಷ್ಟು ಕೆಲಸವಿದೆ ನನ್ನ ಸಹಾಯಕನಾಗಿ ಕೆಲಸ ಮಾಡುತ್ತೀಯಾ ಎಂದು ಕೇಳಿದಾಗ ಶಂತನುವಿಗೆ ನಂಬಲು ಕಷ್ಟವಾಗಿದ್ದರೂ ಸಾವರಿಸಿಕೊಂಡು  ಒಪ್ಪಿಕೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News