ಉಪ ಚುನಾವಣೆ: ಮದ್ಯ, ವಾಹನ ಸೇರಿದಂತೆ 3.23 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

Update: 2019-11-21 16:15 GMT

ಬೆಂಗಳೂರು, ನ.21: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಸಂಬಂಧಿಸಿದಂತೆ ಅಬಕಾರಿ ಪೊಲೀಸರು ವಿವಿಧ ಕಡೆ ದಾಳಿ ನಡೆಸಿ, ವಿವಿಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರಂ, ಶಿವಾಜಿನಗರ, ಯಶವಂತಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಸುಮಾರು 373 ಕಡೆ ದಾಳಿ ನಡೆಸಿ ಮದ್ಯ, ವಾಹನಗಳು ಹಾಗೂ ಇನ್ನಿತರೆ ವಸ್ತುಗಳು ಸೇರಿದಂತೆ ಒಟ್ಟು 3.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಗುರುವಾರದಂದು ಬೆಂಗಳೂರು (ಪಶ್ಚಿಮ) ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನ ಹಾಗೂ ಗಾಂಧಿನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದೊಡ್ಡ ಆಲದ ಮರ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಒಂದು ದ್ವಿಚಕ್ರ ವಾಹನ ಮತ್ತು 12,600 ಲೀಟರ್ ಮದ್ಯ ಜಪ್ತಿ ಮಾಡಿ, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News