ಏಕಪಕ್ಷದ ಸ್ಥಿರ ಸರಕಾರ ಸ್ಥಾಪನೆ-ಅಭಿವೃದ್ಧಿ ಪರ ಮತಯಾಚನೆ: ಅರವಿಂದ ಲಿಂಬಾವಳಿ

Update: 2019-11-21 16:17 GMT

ಬೆಂಗಳೂರು, ನ.21: ಏಕಪಕ್ಷದ ಸ್ಥಿರ ಆಡಳಿತ ರಾಜ್ಯಕ್ಕೆ ಅಗತ್ಯವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳು 33 ವರ್ಷಗಳ ನಂತರ ಅಸ್ತಿತ್ವದಲ್ಲಿವೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿರುವುದರಿಂದ, ರಾಜ್ಯದಲ್ಲೂ ಸ್ಥಿರ ಬಿಜೆಪಿ ಸರಕಾರವಿದ್ದರೆ ಅಭಿವೃದ್ಧಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ರಾಜ್ಯ ಬಿಜೆಪಿ ಉಪ ಚುನಾವಣೆ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದರು.

ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಕರಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರಪತ್ರದಲ್ಲಿ ರಾಜ್ಯದಲ್ಲಿ ಸ್ಥಿರ ಸರಕಾರಕ್ಕಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಬಿಜೆಪಿ ನೇತೃತ್ವದ ಸಾಧನೆಗಳು ಹಾಗೂ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳನ್ನು ಕರಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಈ ಚುನಾವಣೆಯಲ್ಲಿ ಸ್ಥಿರ ಸರಕಾರದ ಅಗತ್ಯತೆಯನ್ನು ಮತದಾರರ ಮುಂದಿಟ್ಟು ಮತ ಕೋರಲಾಗುವುದು. ಈ ಚುನಾವಣೆಯನ್ನು ರಾಜಕೀಯ ಧ್ರುವೀಕರಣ ಎಂದು ಬಿಜೆಪಿ ಭಾವಿಸುತ್ತದೆ. ಹಿಂದಿನ ಸಮ್ಮಿಶ್ರ ಸರಕಾರ ಸುಭದ್ರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಈ ಹಿಂದೆ ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದರು. ಇದೀಗ ನೆರೆ, ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆ ಮುಂತಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ಯಡಿಯೂರಪ್ಪ ತೆಗೆದುಕೊಂಡು ಉತ್ತಮ ಆಡಳಿತ ನೀಡಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಉಪ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಉಪ ಚುನಾವಣೆ ನಡೆಯುವ 4,185 ಬೂತ್‌ಗಳಲ್ಲಿ ರವಿವಾರದೊಳಗೆ ಬೂತ್ ಸಮಿತಿಗಳನ್ನು ರಚಿಸಲಾಗುವುದು. ವಾಟ್ಸ್ ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಗುವುದು. 15 ಕ್ಷೇತ್ರಗಳಲ್ಲಿ ಪಕ್ಷದ ಎಲ್ಲ 8 ಮೋರ್ಚಾಗಳು ಈಗಾಗಲೇ ಪ್ರಚಾರ ಆರಂಭಿಸಿವೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದಗೌಡ, ಸುರೇಶ್ ಅಂಗಡಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಶ್ರೀರಾಮುಲು ಸೇರಿದಂತೆ ಪಕ್ಷದ ಎಲ್ಲ ಪ್ರಮುಖರು ನ.23ರಿಂದ ರಾಜ್ಯಾದ್ಯಂತ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಯಡಿಯೂರಪ್ಪ ನ.23ರಂದು ಅಥಣಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ನಳಿನ್ ಕುಮಾರ್ ಕಟೀಲ್ ನ.23ರಂದು ಕೆ.ಆರ್.ಪೇಟೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ನಾಳೆ ಕಲಬುರಗಿ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಅಭಿವೃದ್ಧಿಗೊಂಡ ಈ ವಿಮಾನ ನಿಲ್ದಾಣದಿಂದ ಉತ್ತರ ಕರ್ನಾಟಕ ಪ್ರದೇಶಕ್ಕೆ ಹೆಚ್ಚು ಪ್ರಯೋಜನವಾಗಲಿದೆ. ನಾಳೆಯೇ ಮೊದಲ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ಹೊರಡಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಂಚಾಲಕರಾದ ಎ.ಎಚ್.ಆನಂದ್, ಸಹ ವಕ್ತಾರರಾದ ಎಸ್.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News